ಮ್ಯಾನ್ಮಾರ್ ವಲಸಿಗನ ಸಾವಿಗೆ ಥೈಲ್ಯಾಂಡ್ ಯೋಧರ ಚಿತ್ರಹಿಂಸೆ ಕಾರಣ: ಮಾನವ ಹಕ್ಕು ಗುಂಪಿನ ಹೇಳಿಕೆ
ಬ್ಯಾಂಕಾಕ್: ಥೈಲ್ಯಾಂಡ್‍ನ ಗಡಿಭಾಗದಲ್ಲಿ ಈ ವರ್ಷದ ಆರಂಭದಲ್ಲಿ ಮ್ಯಾನ್ಮಾರ್ ವಲಸಿಗನ ಭಯಾನಕ ಸಾವಿನ ಬಗ್ಗೆ ಥೈಲ್ಯಾಂಡ್‍ನ ಮೂವರು ಯೋಧರನ್ನು ಸಂಪೂರ್ಣವಾಗಿ ತನಿಖೆ ಮಾಡಲು ಮಾನವ ಹಕ್ಕುಗಳ ಗುಂಪು ಆಗ್ರಹಿಸಿದ್ದು ಈ ಮೂವರು ಯೋಧರು ವಲಸಿಗನಿಗೆ ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ಆರೋಪಿಸಿದೆ.
ಮ್ಯಾನ್ಮಾರ್ ಪ್ರಜೆ ಆಂಗ್ ಕೊಕೊ (37 ವರ್ಷ) ಥೈಲ್ಯಾಂಡ್‍ನ ಮಾನವ ಹಕ್ಕು ನಿಗಾ ಏಜೆನ್ಸಿಯೊಂದರ ಸಮವಸ್ತ್ರ ಧರಿಸಿದ್ದಲ್ಲದೆ ಅದರ ಮೇಲೆ ಥೈಲ್ಯಾಂಡ್‍ನ ಧ್ವಜವಿದ್ದ ಶಾಲನ್ನು ಹೊದ್ದುಕೊಂಡಿದ್ದ ಎಂಬ ಕಾರಣಕ್ಕೆ ಥೈಲ್ಯಾಂಡ್‍ನ ಮೂವರು ಯೋಧರು ಹಾಗೂ ಮ್ಯಾನ್ಮಾರ್ ನ ಮತ್ತೊಬ್ಬ ಪ್ರಜೆ ಸಿರಾಚುಚ್ ಸೇರಿಕೊಂಡು ಕೊಕೊನನ್ನು ಸಮೀಪದ ಮಿಲಿಟರಿ ಬಂಕರ್‍ಗೆ ಕರೆದೊಯ್ದು ಬಿದಿರಿನ ಬೆತ್ತದಿಂದ ಥಳಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಕಾನೂನು ದಾಖಲೆಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಗುಂಪು `ಫೋರ್ಟಿಫೈ ರೈಟ್ಸ್' ಹೇಳಿದೆ.
ಆಂಗ್ ಕೊಕೊ ಸಾವನ್ನಪ್ಪಿದ ಸಂದರ್ಭ ಆ ಸ್ಥಳದಲ್ಲಿದ್ದ ಸಿರಾಚುಚ್‍ಗೆ ಥೈಲ್ಯಾಂಡ್ ನ್ಯಾಯಾಲಯ ಸೆಪ್ಟಂಬರ್ ನಲ್ಲಿ 5 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಆದರೆ ತನ್ನ ಜತೆಗಿದ್ದ ಯೋಧರನ್ನು ಸಿರಾಚುಚ್ ಗುರುತಿಸಲಿಲ್ಲ ಎಂದು ಥೈಲ್ಯಾಂಡ್ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಈ ತೀರ್ಪಿಗೆ ಅಸಮಾಧಾನ ಸೂಚಿಸಿರುವ `ಫೋರ್ಟಿಫೈ ರೈಟ್ಸ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮ್ಯಾಥ್ಯೂ ಸ್ಮಿತ್ `ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸದಸ್ಯನಾಗಿ ಆಯ್ಕೆಗೊಂಡಿರುವ ಥೈಲ್ಯಾಂಡ್ ಮಾನವ ಹಕ್ಕುಗಳನ್ನು ರಕ್ಷಿಸುವ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ. ಆಂಗ್ ಕೊಕೊ ಸಾವಿಗೆ ಹೊಣೆಯಾಗಿರುವ ಯೋಧರಿಗೂ ಶಿಕ್ಷೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.