ನೆಟ್‌ಫ್ಲಿಕ್ಸ್ ಲೈವ್‌ಸ್ಟ್ರೀಮ್ ಸ್ಥಗಿತ: ಬಾಕ್ಸಿಂಗ್ ಪಂದ್ಯ ವೀಕ್ಷಿಸಲಾಗದೆ ಪರದಾಡಿದ ಅಭಿಮಾನಿಗಳು

Update: 2024-11-16 07:15 GMT

Photo credit: PTI

ಹೊಸದಿಲ್ಲಿ: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಶನಿವಾರ ವ್ಯಾಪಕವಾದ ತಾಂತ್ರಿಕ ಸಮಸ್ಯೆಯನ್ನು ಅನುಭವಿಸಿದ್ದು, ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವಿನ ಬಾಕ್ಸಿಂಗ್ ಪಂದ್ಯ ನೆಟ್ ಫ್ಲಿಕ್ಸ್ ಮೂಲಕ ವೀಕ್ಷಿಸಲು ಪ್ರಯತ್ನಿಸಿದ ಪ್ರಪಂಚದಾದ್ಯಂತದ ಸಾವಿರಾರು ಬಳಕೆದಾರರ ಮೇಲೆ ಇದು ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

ಡಲ್ಲಾಸ್ ಕೌಬಾಯ್ಸ್‌ನ AT&T ಸ್ಟೇಡಿಯಂನಲ್ಲಿ ಐತಿಹಾಸಿಕ ಬಾಕ್ಸಿಂಗ್ ಪಂದ್ಯ ನಡೆದಿತ್ತು. ಈ ಐತಿಹಾಸಿಕ ಬಾಕ್ಸಿಂಗ್ ಪಂದ್ಯದಲ್ಲಿ ಮೈಕ್ ಟೈಸನ್ ಅವರನ್ನು ಜೇಕ್ ಪೌಲ್ ಸೋಲಿಸಿದ್ದಾರೆ.

OTT ದೈತ್ಯ Netflix ನಲ್ಲಿ ಲೈವ್ ಸ್ಟ್ರೀಮ್ ಸಮಯದಲ್ಲಿ ಬಳಕೆದಾರರು ನಿರಂತರ ಬಫರಿಂಗ್ ಸಮಸ್ಯೆ ಅನುಭವಿಸಿದ್ದಾರೆ.

ಲಕ್ಷಾಂತರ ಜನರು ಲಾಗ್ ಆನ್ ಮಾಡಿದ್ದರಿಂದ ನೆಟ್‌ಫ್ಲಿಕ್ಸ್ HQಗಳಲ್ಲಿ ಸರ್ವರ್ ಕ್ರ್ಯಾಶ್ ಆಗುತ್ತಿರುವುದು ಕಂಡು ಬಂದಿದೆ. ತಾಂತ್ರಿಕ ತೊಂದರೆಗಳು ಪಂದ್ಯದ ಲೈವ್‌ಸ್ಟ್ರೀಮ್‌ಗೆ ಅಡ್ಡಿಪಡಿಸಿದೆ‌. ಇದು ಬಾಕ್ಸರ್ ಪಾಲ್ ಮತ್ತು ಬಾಕ್ಸಿಂಗ್ ದಂತಕಥೆ ಟೈಸನ್ ಅವರ ನಡುವಿನ ಪಂದ್ಯ ವೀಕ್ಷಣೆಗೆ ಅಡಚಣೆ ಉಂಟುಮಾಡಿದೆ.

ಇದುವರೆಗೆ ನೆಟ್ ಫ್ಲಿಕ್ಸ್ ಲೈವ್ ಸ್ಟ್ರೀಮ್ ಮಾಡಿದ ಅತಿದೊಡ್ಡ ಬಾಕ್ಸಿಂಗ್ ಪಂದ್ಯ ಇದಾಗಿದೆ.

ಆನ್‌ಲೈನ್ ಸೇವೆಯಲ್ಲಿನ ಅಡಚಣೆಗಳನ್ನು ಪತ್ತೆ ಹಚ್ಚುವ Downdetector.com ವೆಬ್‌ಸೈಟ್ ಪ್ರಕಾರ, 85,000ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಗಳನ್ನು ಎದುರಿಸಿದ್ದಾರೆ. ನೆಟ್ ಫ್ಲಿಕ್ಸ್ ಸ್ಥಗಿತವು( ತಾಂತ್ರಿಕ ತೊಂದರೆ) ಪ್ರಾಥಮಿಕವಾಗಿ ನ್ಯೂಯಾರ್ಕ್, ಸಿಯಾಟಲ್ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ.

ನೆಟ್‌ಫ್ಲಿಕ್ಸ್ ನಲ್ಲಿ ಬಾಕ್ಸಿಂಗ್ ಪಂದ್ಯ ಲೈವ್‌ಸ್ಟ್ರೀಮ್ ವೀಕ್ಷಿಸಲು ಸಾಧ್ಯವಾಗದೆ ಬಾಕ್ಸಿಂಗ್ ಅಭಿಮಾನಿಗಳು ಹತಾಶೆ ಮತ್ತು ನೆಟ್ ಫ್ಲಿಕ್ಸ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬಾಕ್ಸಿಂಗ್ ಅಭಿಮಾನಿಯೊಬ್ಬರು ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನೆಟ್‌ಫ್ಲಿಕ್ಸ್ ಈ ಬಫರಿಂಗ್ ಸಮಸ್ಯೆ ಸರಿಪಡಿಸದಿದ್ದರೆ, ಇದು ಸ್ಟ್ರೀಮಿಂಗ್ ಇತಿಹಾಸದಲ್ಲಿ ಅತಿದೊಡ್ಡ ವೈಫಲ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಈ ವಿಷಯದ ಬಗ್ಗೆ ನೆಟ್‌ಫ್ಲಿಕ್ಸ್ ಇನ್ನೂ ಪ್ರತಿಕ್ರಿಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News