ಇಸ್ರೇಲ್‍ನ ಯುದ್ಧನೀತಿ ಕುರಿತ ಬೈಡನ್ ಹೇಳಿಕೆ ತಪ್ಪು: ನೆತನ್ಯಾಹು
ಟೆಲ್‍ಅವೀವ್: ಗಾಝಾದಲ್ಲಿನ ಯುದ್ಧಕ್ಕೆ ಸಂಬಂಧಿಸಿ ಇಸ್ರೇಲ್‍ನ ನೀತಿಯು ಇಸ್ರೇಲ್‍ಗೆ ನೆರವಾಗುವ ಬದಲು ಹಾನಿಯುಂಟು ಮಾಡುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
`ನಾನು ಬಹುಸಂಖ್ಯಾತರ ಆಶಯದ ಬದಲು ನನ್ನ ವೈಯಕ್ತಿಕ ನೀತಿಗೆ ಆದ್ಯತೆ ನೀಡುತ್ತೇನೆ ಮತ್ತು ಇದು ಇಸ್ರೇಲ್‍ನ ಹಿತಾಸಕ್ತಿಗೆ ಹಾನಿಯುಂಟು ಮಾಡುತ್ತಿದೆ ಎಂಬುದು ಅವರ ಹೇಳಿಕೆಯ ಅರ್ಥವಾಗಿದ್ದರೆ ಈ ಎರಡೂ ತಪ್ಪು ಅಭಿಪ್ರಾಯಗಳು ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಯುದ್ಧಕ್ಕೆ ಸಂಬಂಧಿಸಿದ ನನ್ನ ನೀತಿಗಳನ್ನು ಬಹುಪಾಲು ಇಸ್ರೇಲಿಗಳು ಬೆಂಬಲಿಸಿದ್ದಾರೆ. ಹಮಾಸ್‍ನ ಉಳಿದ ಬೆಟಾಲಿಯನ್‍ಗಳನ್ನು ನಾಶಗೊಳಿಸಲು ನಾನು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅವರು ಬೆಂಬಲಿಸಿದ್ದಾರೆ. ಒಮ್ಮೆ ನಾವು ಹಮಾಸ್ ಅನ್ನು ನಾಶಗೊಳಿಸಿದರೆ ನಾವು ಗಾಝಾದಲ್ಲಿ ಮಾಡಬೇಕಾದ ಕೊನೆಯ ಕೆಲಸವೆಂದರೆ ಗಾಝಾದ ಉಸ್ತುವಾರಿ ವಹಿಸುವುದು ಎಂದು ಇಸ್ರೇಲ್ ಪ್ರಜೆಗಳು ಹೇಳುತ್ತಿದ್ದಾರೆ' ಎಂದು ನೆತನ್ಯಾಹು ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳ ಬಗ್ಗೆ ನೆತನ್ಯಾಹು ಹೆಚ್ಚು ಗಮನ ವಹಿಸಬೇಕು ಎಂದು ಬೈಡನ್ ಆಗ್ರಹಿಸಿದ್ದರು.
ಹಮಾಸ್‍ನ ವಶದಲ್ಲಿರುವ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ವಾಪಾಸು ಕರೆತರುವಲ್ಲಿ ನೆತನ್ಯಾಹು ವಿಫಲವಾಗಿರುವುದು ಇಸ್ರೇಲ್‍ನಲ್ಲಿ ವ್ಯಾಪಕ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿದ್ದು ನೆತನ್ಯಾಹು ಸರಕಾರವನ್ನು ಪದಚ್ಯುತಗೊಳಿಸಿ ತಕ್ಷಣ ಚುನಾವಣೆ ನಡೆಸುವಂತೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
ಅಮೆರಿಕವು ಇಸ್ರೇಲ್‍ಗೆ ಕೋಟ್ಯಾಂತರ ಡಾಲರ್ ಮೊತ್ತದ ಮಿಲಿಟರಿ ನೆರವಿನ ಜತೆಗೆ ರಾಜತಾಂತ್ರಿಕ ಬೆಂಬಲ ನೀಡುತ್ತಿದ್ದರೂ, ಗಾಝಾವು ಫೆಲೆಸ್ತೀನ್ ಪ್ರಾಧಿಕಾರದ ಆಡಳಿತದಡಿ ಬರಬೇಕು ಎಂಬ ಅಮೆರಿಕದ ಯೋಜನೆಯನ್ನು ನೆತನ್ಯಾಹು ತಿರಸ್ಕರಿಸುತ್ತಿದ್ದಾರೆ. ಈ ಮಧ್ಯೆ, ಗಾಝಾದಲ್ಲಿ ತುರ್ತು ಕದನ ವಿರಾಮ ಜಾರಿಗೊಳ್ಳಬೇಕೆಂದು ಅಂತರಾಷ್ಟ್ರೀಯ ಸಮುದಾಯ ಆಗ್ರಹಿಸುತ್ತಿದೆ.