ಜಪಾನ್ | ಎರಡನೇ ಮಹಾಯುದ್ಧದ ವೇಳೆ ಅಮೆರಿಕ ಹಾಕಿದ್ದ ಬಾಂಬ್ ಈಗ ಸ್ಫೋಟ!

Update: 2024-10-02 17:21 GMT

PC : X \ @Xx17965797N

ಟೋಕಿಯೊ: ಎರಡನೆ ವಿಶ್ವ ಯುದ್ಧದ ಸಂದರ್ಭದಲ್ಲಿ ನೆಲದಲ್ಲಿ ಹುದುಗಿ ಹೋಗಿದ್ದ ಅಮೆರಿಕ ಹಾಕಿದ್ದ ಬಾಂಬೊಂದು ಸ್ಫೋಟಗೊಂಡಿದ್ದರಿಂದ, ಜಪಾನ್ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಭಾರಿ ಕುಳಿ ಸೃಷ್ಟಿಯಾಗಿದ್ದು, 80ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ. ಆದರೆ, ಯಾವುದೇ ಗಾಯಗಳಾಗಿಲ್ಲ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

ನೈಋತ್ಯ ಜಪಾನ್‍ನಲ್ಲಿರುವ ವಿಮಾನ ನಿಲ್ದಾಣದಲ್ಲಿ 500 ಪೌಂಡ್ ತೂಕದ ಬಾಂಬ್ ಸ್ಫೋಟಗೊಂಡಾಗ ಹತ್ತಿರದಲ್ಲಿ ಯಾವುದೇ ವಿಮಾನಗಳಿರಲಿಲ್ಲ. ಘಟನೆಯಿಂದ ಯಾರೂ ಗಾಯಗೊಂಡಿಲ್ಲ. ಸ್ಫೋಟದಿಂದ ಟ್ಯಾಕ್ಸಿ ಮಾರ್ಗದಲ್ಲಿ ಸುಮಾರು 7 ಮೀಟರ್ ಆಳ ಮತ್ತು 3 ಅಡಿ ಆಳದ ಕುಳಿ ಉಂಟಾಗಿದೆ. ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕವು ಜಪಾನ್‍ನ ಮೇಲೆ ಹಾಕಿದ ಬಾಂಬ್‍ಗಳಲ್ಲಿ ಸ್ಫೋಟಗೊಳ್ಳದ ಕೆಲವು ಬಾಂಬ್‍ಗಳನ್ನು ವಿಮಾನ ನಿಲ್ದಾಣದ ಸ್ಥಳದಲ್ಲಿ ಹುಗಿಯಲಾಗಿತ್ತು ಎಂದು ವರದಿಯಾಗಿದೆ.

500 ಪೌಂಡ್ ತೂಕದ ಬಾಂಬ್ ನಿಂದ ಈ ಸ್ಫೋಟ ಸಂಭವಿಸಿದ್ದು, ಯಾವುದೇ ಅಪಾಯವಿಲ್ಲವೆಂದು ಸ್ವಯಂ ರಕ್ಷಣೆ ಪಡೆಗಳು ಹಾಗೂ ಪೊಲೀಸರು ನಡೆಸಿರುವ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಢೀರೆಂದು ಬಾಂಬ್ ಸ್ಫೋಟಗೊಳ್ಳಲು ಕಾರಣವೇನು ಎಂಬುದರ ಕುರಿತು ಅವರು ತನಿಖೆ ನಡೆಯುತ್ತಿದೆ.

ವೈಮಾನಿಕ ಶಾಲೆಯ ಬಳಿ ಚಿತ್ರೀಕರಿಸಲಾಗಿರುವ ವಿಡಿಯೊದಲ್ಲಿ ಈ ಸ್ಫೋಟದಲ್ಲಿ ಡಾಂಬರಿನ ಚೂರುಗಳು ಕಾರಂಜಿಯಂತೆ ಆಕಾಶಕ್ಕೆ ಚಿಮ್ಮಿರುವುದನ್ನು ಕಾಣಬಹುದಾಗಿದೆ. ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ 80ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಗುರುವಾರದಿಂದ ಮತ್ತೆ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯಿತೆ ಇದೆ ಎಂದು ಮುಖ್ಯ ಸಚಿವ ಸಂಪುಟ ಕಾರ್ಯದರ್ಶಿ ಯೋಶಿಮ ಹಯಾಶಿ ತಿಳಿಸಿದ್ದಾರೆ.

1943ರಲ್ಲಿ ಜಪಾನ್ ನೌಕಾದಳದ ವಿಮಾನ ತರಬೇತಿಗಾಗಿ ಮಿಯಾಝಾಕಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News