ಜೋರ್ಡಾನ್: ಅಮೆರಿಕ ಸೇನಾನೆಲೆಯ ಮೇಲೆ ಡ್ರೋನ್ ದಾಳಿ
ಅಮ್ಮಾನ್: ಪಶ್ಚಿಮ ಏಶ್ಯಾದ ಜೋರ್ಡಾನ್ ದೇಶದಲ್ಲಿರುವ ಅಮೆರಿಕದ ಸೇನಾನೆಲೆಯ ಮೇಲೆ ರವಿವಾರ ತಡರಾತ್ರಿ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಯೋಧರು ಹತರಾಗಿದ್ದು ಕನಿಷ್ಟ 34 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಇದರೊಂದಿಗೆ ಗಾಝಾ ಯುದ್ಧ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಶತ್ರುಗಳ ದಾಳಿಯಲ್ಲಿ ಅಮೆರಿಕ ಯೋಧರು ಸಾವನ್ನಪ್ಪಿದ್ದಾರೆ. `ಸಿರಿಯಾ ಮತ್ತು ಇರಾಕ್ನಲ್ಲಿ ಸಕ್ರಿಯವಾಗಿರುವ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪು ನಡೆಸಿರುವ ಈ ದಾಳಿಗೆ ನಾವು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಆಯ್ಕೆಯನ್ನು ಹೊಂದಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ. ಜೋರ್ಡಾನ್ನ ಈಶಾನ್ಯದಲ್ಲಿ ಇರಾಕ್ ಮತ್ತು ಸಿರಿಯಾದ ಗಡಿಗಳು ಸಂಧಿಸುವ ಆಯಕಟ್ಟಿನ ಸ್ಥಳವಾಗಿರುವ `ಟವರ್ 22' ಪ್ರದೇಶದಲ್ಲಿರುವ ಅಮೆರಿಕದ ಸೇನಾನೆಲೆಯನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದಿದೆ.
ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪಿನ ಕೃತ್ಯ ಇದಾಗಿದ್ದು ಸಿರಿಯಾ ಕಡೆಯಿಂದ ಡ್ರೋನ್ ದಾಳಿ ನಡೆದಿದ್ದು ಯಾವ ಗುಂಪು ಇದಕ್ಕೆ ಹೊಣೆಯೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಮೂವರು ಯೋಧರು ಸಾವನ್ನಪ್ಪಿ 34ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ 8 ಯೋಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಈ ಮಧ್ಯೆ, ಇರಾಕ್ನಲ್ಲಿ ಕಾರ್ಯಾಚರಿಸುತ್ತಿರುವ ಹಲವಾರು ಇರಾನ್ ಸಂಯೋಜಿತ ಸಶಸ್ತ್ರ ಹೋರಾಟಗಾರರ ಪ್ರಧಾನ ಸಂಘಟನೆ `ಇಸ್ಲಾಮಿಕ್ ರೆಸಿಸ್ಟೆನ್ಸ್' ರವಿವಾರ ನೀಡಿದ್ದ ಹೇಳಿಕೆಯಲ್ಲಿ `ಜೋರ್ಡಾನ್-ಸಿರಿಯಾ ಗಡಿಭಾಗದಲ್ಲಿರುವ ಹಲವು ನೆಲೆಗಳನ್ನು , ಅಲ್-ರಕ್ಬಾನ್ ಶಿಬಿರ ಸೇರಿದಂತೆ, ಗುರಿಯಾಗಿಸಿ ದಾಳಿ ನಡೆಸಿರುವುದಾಗಿ' ಘೋಷಿಸಿತ್ತು. ಅಲ್-ರಕ್ಬಾನ್ ಶಿಬಿರ ಅಮೆರಿಕದ ಸೇನಾನೆಲೆ ಟವರ್22ರ ಸನಿಹದಲ್ಲಿದೆ.
ಇರಾನ್ ಸಂಯೋಜಿತ ಪ್ರಾದೇಶಿಕ ಸಶಸ್ತ್ರ ಹೋರಾಟಗಾರರ ಗುಂಪು ಅಮೆರಿಕದ ಆಕ್ರಮಣದ ವಿರುದ್ಧ ತಮ್ಮ ಸ್ವಂತ ವಿವೇಚನೆಯಿಂದ ಪ್ರತಿಕ್ರಿಯಿಸುತ್ತದೆ ಎಂದು ಇರಾನ್ನ ಗುಪ್ತಚರ ಇಲಾಖೆ ಸಚಿವ ಇಸ್ಮಾಯಿಲ್ ಖತೀಬ್ ಹೇಳಿದ್ದಾರೆ.
ದಾಳಿಯನ್ನು ಖಂಡಿಸಿರುವ ಇರಾಕ್ ಸರಕಾರ ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರದ ಸರಣಿಯನ್ನು ಅಂತ್ಯಗೊಳಿಸುವಂತೆ ಆಗ್ರಹಿಸಿದೆ. ಮಧ್ಯಪ್ರಾಚ್ಯ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವಂತಾಗಲು ನಮ್ಮ ಮಿತ್ರದೇಶಗಳು ನಡೆಸುವ ಪ್ರಯತ್ನಕ್ಕೆ ಬ್ರಿಟನ್ ನ ಅಚಲ ಬೆಂಬಲ ಮುಂದುವರಿಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.
ಆರೋಪ ನಿರಾಕರಿಸಿದ ಇರಾನ್
ಜೋರ್ಡಾನ್-ಸಿರಿಯಾ ಗಡಿಪ್ರದೇಶದ ಬಳಿ ಅಮೆರಿಕದ ಸೇನಾನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಇರಾನ್ ಹೇಳಿದೆ. ದಾಳಿ ನಡೆಸಿದ ಸಶಸ್ತ್ರ ಹೋರಾಟಗಾರರ ಗುಂಪಿಗೆ ಇರಾನ್ ಬೆಂಬಲ ನೀಡಿದೆ ಎಂಬ ಅಮೆರಿಕ ಮತ್ತು ಬ್ರಿಟನ್ ಆರೋಪದಲ್ಲಿ ಹುರುಳಿಲ್ಲ ಎಂದು ಇರಾನ್ ತಳ್ಳಿಹಾಕಿದೆ. `ಫೆಲೆಸ್ತೀನೀಯರು ಅಥವಾ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಮಾರ್ಗವನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು `ರೆಸಿಸ್ಟೆನ್ಸ್ ಗ್ರೂಫ್' ನಿರ್ಧರಿಸುವಲ್ಲಿ ಇರಾನ್ ಶಾಮೀಲಾಗಿಲ್ಲ ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ಪ್ರತಿಕ್ರಿಯಿಸಿದ್ದಾರೆ.