ವಿಶ್ವಸಂಸ್ಥೆಯಲ್ಲಿ `ಕಾಶ್ಮೀರ' ಪ್ರಸ್ತಾಪ : ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ
ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ(ಯುಎನ್‍ಎಚ್‍ಆರ್‍ಸಿ) ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಮತ್ತು ಟರ್ಕಿಯನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಯುಎನ್‍ಎಚ್‍ಆರ್‍ಸಿಯ 55ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್ `ಕಾಶ್ಮೀರ ವಿಷಯವನ್ನು ಪ್ರಸ್ತಾವಿಸಲು ಟರ್ಕಿ ನಡೆಸಿದ ಪ್ರಯತ್ನ ವಿಷಾದನೀಯವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಭಾರತದ ಆಂತರಿಕ ವಿಷಯಗಳ ಬಗ್ಗೆ ಹೇಳಿಕೆ ನೀಡುವುದರಿಂದ ಅದು ದೂರವಿರುವ ವಿಶ್ವಾಸವಿದೆ' ಎಂದರು.
ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಸಿಂಗ್ ` ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಬಂಧಿಸಿರುವ ಉಗ್ರರಿಗೆ ನೆಲೆ ಒದಗಿಸುವ ದೇಶವು ಬಹುತ್ವದ ನೀತಿ ಮತ್ತು ಪ್ರಜಾಪ್ರಭುತ್ವದ ರುಜುವಾತುಗಳು ಜಗತ್ತಿಗೇ ಮಾದರಿಯಾಗಿರುವ ಭಾರತದ ಬಗ್ಗೆ ಟೀಕೆ ಮಾಡುವುದು ಹಾಸ್ಯಾಸ್ಪದವಾಗಿದೆ. ಈ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ವಿಶ್ವಸಂಸ್ಥೆ ವೇದಿಕೆಯ ಸಮಯವನ್ನು ಹಾಳು ಮಾಡಲು ನಾವು ಬಯಸುವುದಿಲ್ಲ. ಆದರೆ ನಾವು ಮೂರು ವಿಷಯಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಖ್‍ಗಳು ಭಾರತದ ಅವಿಭಾಜ್ಯ ಭಾಗಗಳಾಗಿವೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಖಾತರಿಪಡಿಸಲು ಭಾರತ ಸರಕಾರ ಕೈಗೊಂಡ ಕ್ರಮಗಳು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಭಾರತದ ಆಂತರಿಕ ವಿಷಯದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ' ಎಂದರು.
`ತನ್ನ ದೇಶದಲ್ಲಿ ಅಲ್ಪಸಂಖ್ಯಾತರ ವ್ಯವಸ್ಥಿತ ಕಿರುಕುಳವನ್ನು ಸಾಂಸ್ಥೀಕಗೊಳಿಸಿದ ಮತ್ತು ಹೀನಾಯ ಮಾನವ ಹಕ್ಕುಗಳ ದಾಖಲೆಯನ್ನು ಹೊಂದಿರುವ ದೇಶವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ ಮಹತ್ತರ ಪ್ರಗತಿ ಸಾಧಿಸಿರುವ ಭಾರತದ ಬಗ್ಗೆ ಹೇಳಿಕೆ ನೀಡುವುದು ಕೇವಲ ವ್ಯಂಗ್ಯ ಮಾತ್ರವಲ್ಲ ವಿಕೃತ ವರ್ತನೆಯಾಗಿದೆ' ಎಂದು ಭಾರತ ಟೀಕಿಸಿದೆ.