ಫ್ರಾನ್ಸ್ ಚುನಾವಣೆ: ಎಡಪಂಥೀಯ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ, ಬಹುಮತ ಗಳಿಸುವಲ್ಲಿ ವಿಫಲ

Update: 2024-07-08 12:01 GMT

PC : X 

ಪ್ಯಾರಿಸ್ : ಫ್ರೆಂಚ್ ಎಡಪಕ್ಷಗಳ ಮೈತ್ರಿಕೂಟವು ರವಿವಾರ ಶಾಸಕಾಂಗ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ, ಆದರೆ ಬಹುಮತವನ್ನು ಗಳಿಸುವಲ್ಲಿ ವಿಫಲಗೊಂಡಿದೆ. ಚುನಾವಣಾ ಫಲಿತಾಂಶವು ಐರೋಪ್ಯ ಒಕ್ಕೂಟದ ಆಧಾರಸ್ತಂಭ ಮತ್ತು ಒಲಿಂಪಿಕ್ ಆತಿಥೇಯ ದೇಶವಾಗಿರುವ ಫ್ರಾನ್ಸ್ ತ್ರಿಶಂಕು ಸಂಸತ್ ಮತ್ತು ರಾಜಕೀಯ ನಿಷ್ಕ್ರಿಯತೆಯ ಸಾಧ್ಯತೆಯನ್ನು ಎದುರಿಸುವಂತೆ ಮಾಡಿದೆ. ರಾಜಕೀಯ ಪ್ರಕ್ಷುಬ್ಧತೆಯು ಮಾರುಕಟ್ಟೆಗಳನ್ನು ಮತ್ತು ಐರೋಪ್ಯ ಒಕ್ಕೂಟದಲ್ಲಿ ಎರಡನೆಯ ಅತಿ ದೊಡ್ಡ ಆರ್ಥಿಕತೆಯಾಗಿರುವ ಫ್ರೆಂಚ್ ಆರ್ಥಿಕತೆಯನ್ನು ಕಂಗೆಡಿಸಬಹುದು ಮತ್ತು ಯುಕ್ರೇನ್ ಯುದ್ಧ, ಜಾಗತಿಕ ರಾಜತಾಂತ್ರಿಕತೆ ಮತ್ತು ಯುರೋಪಿನ ಆರ್ಥಿಕ ಸ್ಥಿತಿಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು.

ಐರೋಪ್ಯ ಸಂಸತ್ತಿಗೆ ಮತದಾನದಲ್ಲಿ ಫ್ರಾನ್ಸ್ ನ ಬಲಪಂಥೀಯರು ಮೇಲುಗೈ ಸಾಧಿಸಿದ ಬಳಿಕ ಜೂ.9ರಂದು ಚುನಾವಣೆಯನ್ನು ಘೋಷಿಸಿದ್ದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು,ಇನ್ನೊಮ್ಮೆ ಮತದಾರರ ಬಳಿ ತೆರಳುವುದು ‘ಸ್ಪಷ್ಟೀಕರಣವನ್ನು’ ಒದಗಿಸುತ್ತದೆ ಎಂದು ಹೇಳಿದ್ದರು.

ಮ್ಯಾಕ್ರೋನ್ ಅವರ ಈ ಜೂಜು ಪ್ರತಿಯೊಂದು ಹಂತದಲ್ಲಿಯೂ ತಿರುಗುಬಾಣವಾಗಿರುವಂತೆ ಕಂಡುಬರುತ್ತಿದೆ. ಸೋಮವಾರ ಬೆಳಿಗ್ಗೆ ಬಿಡುಗಡೆಗೊಂಡ ಅಧಿಕೃತ ಫಲಿತಾಂಶಗಳ ಪ್ರಕಾರ, ಫ್ರಾನ್ಸ್ ನ ಎರಡು ಶಾಸಕಾಂಗ ಸದನಗಳ ಪೈಕಿ ಹೆಚ್ಚು ಶಕ್ತಿಶಾಲಿಯಾಗಿರುವ 577 ಸದಸ್ಯಬಲದ ರಾಷ್ಟ್ರೀಯ ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದ 289 ಸ್ಥಾನಗಳನ್ನು ಗೆಲ್ಲುವಲ್ಲಿ ಎಲ್ಲ ಮೂರೂ ಬಣಗಳು ವಿಫಲಗೊಂಡಿವೆ.

ನ್ಯೂ ಪಾಪ್ಯುಲರ್ ಫ್ರಂಟ್ ಎಡಪಕ್ಷಗಳ ಮೈತ್ರಿಕೂಟವು 180 ಸ್ಥಾನಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ಮ್ಯಾಕ್ರೋನ್ ಅವರ ಮಧ್ಯಮ ನಿಲುವಿನ ಮೈತ್ರಿಕೂಟ 160 ಗೆದ್ದಿದೆ. ಮರೀನ್ ಲೆ ಪೆನ್ ಅವರ ಬಲಪಂಥೀಯ ನ್ಯಾಷನಲ್ ರ್ಯಾಲಿ ಮತ್ತು ಅದರ ಮಿತ್ರಪಕ್ಷಗಳು 140ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಮೂರನೇ ಸ್ಥಾನಕ್ಕೆ ಸೀಮಿತಗೊಂಡಿವೆ.

ತ್ರಿಶಂಕು ಸಂಸತ್ ಅನ್ನು ಫ್ರಾನ್ಸ್ ಈವರೆಗೆ ಕಂಡಿರಲಿಲ್ಲ.

ನಮ್ಮ ದೇಶವು ಅಭೂತಪೂರ್ವ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಕೆಲವೇ ವಾರಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್ಗಾಗಿ ವಿಶ್ವವನ್ನು ಸ್ವಾಗತಿಸಲು ಸಜ್ಜಾಗುತ್ತಿದೆ ಎಂದು ಪ್ರಧಾನಿ ಗ್ಯಾಬ್ರಿಯಲ್ ಅಟ್ಟಲ್ ಹೇಳಿದರು. ಅವರು ರಾಜೀನಾಮೆ ನೀಡಲು ಸಜ್ಜಾಗಿದ್ದಾರಾದರೂ, ಅಗತ್ಯವಿರುವವರೆಗೆ ಹುದ್ದೆಯಲ್ಲಿ ಮುಂದುವರಿಯಲು ತಾನು ಸಿದ್ಧನಿದ್ದೇನೆ ಎಂದರು. ಮ್ಯಾಕ್ರೋನ್ ಅವರ ಅಧ್ಯಕ್ಷೀಯ ಅಧಿಕಾರಾವಧಿ ಇನ್ನೂ ಮೂರು ವರ್ಷ ಉಳಿದಿದೆ.

ನೂತನ ಶಾಸಕಾಂಗವು ಅಸ್ಥಿರತೆಯಿಂದ ಕೂಡಿದೆ. ದೇಶದ ನೂತನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವುದು ಅಸ್ಪಷ್ಟವಾಗಿರುವ ನಡುವೆಯೇ ನ್ಯಾಟೋ ಶೃಂಗಸಭೆಯಲ್ಲಿ ಭಾಗವಹಿಸಲು ಮ್ಯಾಕ್ರೋನ್ ಈ ವಾರ ಅಮೆರಿಕಕ್ಕೆ ತೆರಳಲಿದ್ದಾರೆ. ತನ್ನ ನೀತಿಗಳನ್ನು ತೀವ್ರವಾಗಿ ವಿರೋಧಿಸಿದ್ದ ರಾಜಕಾರಣಿಯೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದು ಅವರಿಗೆ ಅನಿವಾರ್ಯವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News