ಇಸ್ರೇಲ್ ವಿದೇಶಾಂಗ ಸಚಿವರನ್ನು ಭೇಟಿಯಾದ ಲಿಬಿಯಾ ಸಚಿವೆ
ಟ್ರಿಪೋಲಿ, ಆ.28: ಇಸ್ರೇಲ್ನ ವಿದೇಶಾಂಗ ಸಚಿವರು ಕಳೆದ ವಾರ ಲಿಬಿಯಾದ ವಿದೇಶ ವ್ಯವಹಾರ ಸಚಿವೆಯನ್ನು ಭೇಟಿಯಾಗಿದ್ದರು ಎಂಬ ವರದಿಯ ಬಳಿಕ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ, ವಿದೇಶ ವ್ಯವಹಾರ ಸಚಿವೆ ನಜ್ಲಾ ಮ್ಯಾಂಗೌಷ್‍ರನ್ನು ಅಮಾನತುಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಲಿಬಿಯಾ ಮತ್ತು ಇಸ್ರೇಲ್ನ ಉನ್ನತ ರಾಜತಾಂತ್ರಿಕರ ನಡುವಿನ ಈ ಪ್ರಪ್ರಥಮ ಸಭೆಯ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿನ `ನ್ಯಾಷನಲ್ ಯುನಿಟಿ' ಸರಕಾರದ ಪ್ರಧಾನಿ ಅಬ್ದುಲ್ ಹಮೀದ್ ಡಿಬೈಬಾ ಆದೇಶಿಸಿದ್ದಾರೆ. ಇಸ್ರೇಲ್ನ ವಿದೇಶಾಂಗ ಸಚಿವ ಎಲೀ ಕೊಹೆನ್ ಮತ್ತು ನಜ್ಲಾ ಕಳೆದ ವಾರ ರೋಮ್ನಲ್ಲಿ ಭೇಟಿಯಾಗಿದ್ದರು. ಈ ಸಂದರ್ಭ ಯಹೂದಿ ದೇವಾಲಯ, ಸ್ಮಶಾನಗಳ ನವೀಕರಣ ಸೇರಿದಂತೆ ಲಿಬಿಯಾದ ಹಿಂದಿನ ಯಹೂದಿ ಸಮುದಾಯದ ಪರಂಪರೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಚರ್ಚಿಸಲಾಗಿದೆ. ಜತೆಗೆ ಮಾನವೀಯ ಸಮಸ್ಯೆಗಳು, ಕೃಷಿ ಮತ್ತು ನೀರಿನ ನಿರ್ವಹಣೆಗೆ ಇಸ್ರೇಲ್ನ ಸಂಭಾವ್ಯ ನೆರವು ಕುರಿತ ಮಾತುಕತೆಯೂ ನಡೆದಿದೆ ಎಂದು ಇಸ್ರೇಲ್ನ ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಸಭೆಯ ವಿಷಯವನ್ನು ರಹಸ್ಯವಾಗಿಡಲಾಗಿತ್ತು. ಆದರೆ ಇಸ್ರೇಲ್ ಮಾಧ್ಯಮದಲ್ಲಿ ವರದಿ ಸೋರಿಕೆಯಾದ ಹಿನ್ನೆಲೆಯಲ್ಲಿ ಇಸ್ರೇಲ್ನ ಸಚಿವಾಲಯ ಅಧಿಕೃತ ಹೇಳಿಕೆ ನೀಡಿದೆ. ಆದರೆ, ವರದಿಗೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸಭೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಲಿಬಿಯಾ ಪ್ರಯತ್ನಿಸಿದೆ. `ಉಭಯ ಸಚಿವರ ಭೇಟಿ ಪೂರ್ವ ನಿರ್ಧಾರಿತವಲ್ಲ ಮತ್ತು ಅಧಿಕೃತವಲ್ಲ. ಈ ಭೇಟಿಯ ಸಂದರ್ಭ ಯಾವುದೇ ಚರ್ಚೆ ನಡೆದಿಲ್ಲ ಅಥವಾ ಒಪ್ಪಂದ ನಡೆದಿಲ್ಲ' ಎಂದು ಲಿಬಿಯಾದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಸಭೆಯ ಬಗ್ಗೆ ಲಿಬಿಯಾದ ಪ್ರಧಾನಿಗೆ ಮಾಹಿತಿ ಇತ್ತು. ಕಳೆದ ತಿಂಗಳು ಅವರು ರೋಮ್‍ಗೆ ಭೇಟಿ ನೀಡಿದ್ದ ಸಂದರ್ಭ ಸಭೆಗೆ ಹಸಿರು ನಿಶಾನೆ ತೋರಿದ್ದರು. ಸುಮಾರು 2 ಗಂಟೆ ಸಭೆ ನಡೆದಿದ್ದು ರೋಮ್‍ನಿಂದ ಹಿಂತಿರುಗಿದ ಬಳಿಕ ನಜ್ಲಾ ಮ್ಯಾಂಗೌಷ್ ಸಭೆಯ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ದರು. ಜನವರಿಯಲ್ಲಿ ಅಮೆರಿಕದ ಸಿಐಎ ನಿರ್ದೇಶಕ ವಿಲಿಯಮ್ ಬನ್ರ್ಸ್ ಲಿಬಿಯಾಕ್ಕೆ ಭೇಟಿ ನೀಡಿದ ಸಂದರ್ಭ ಪ್ರಧಾನಿ ಅಬ್ದುಲ್ ಹಮೀದ್ ಡಿಬೈಬಾ ಜತೆ ಇಸ್ರೇಲ್-ಲಿಬಿಯಾ ಬಾಂಧವ್ಯವನ್ನು ಸಾಮಾನ್ಯೀಕರಣಗೊಳಿಸುವ ಬಗ್ಗೆ ಚರ್ಚಿಸಿದ್ದರು ಎಂದು ಲಿಬಿಯಾ ಸರಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ, ಇಸ್ರೇಲ್ ಸಚಿವರ ಜತೆ ಲಿಬಿಯಾ ಸಚಿವರ ಭೇಟಿಯನ್ನು ವಿರೋಧಿಸಿ ಲಿಬಿಯಾದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಝವಿಯಾ ನಗರದಲ್ಲಿ ಪ್ರತಿಭಟನಾಕಾರರು ಇಸ್ರೇಲ್ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಪ್ರಧಾನಿ ಡಿಬೈಬಾರ ಭದ್ರಕೋಟೆ ಎನಿಸಿರುವ ಮಿಸ್ರಾಟ ನಗರದಲ್ಲೂ ಪ್ರತಿಭಟನೆ ನಡೆದಿದೆ. ವಿದೇಶಾಂಗ ಸಚಿವಾಲಯದ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು ತನ್ನ ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ವಿಶ್ವಸಂಸ್ಥೆ ಮತ್ತು ಇತರ ದೇಶಗಳಿಂದ ಹೆಚ್ಚುತ್ತಿರುವ ಒತ್ತಡಕ್ಕೆ ಒಳಗಾದ ಕಾರಣ ಪ್ರಧಾನಿ ಅಬ್ದುಲ್ ಹಮೀದ್ ಡಿಬೈಬಾ ವಿದೇಶಿ ಸರಕಾರಗಳನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ಸರಕಾರ:
2011ರಲ್ಲಿ ನೇಟೊ ನೇತೃತ್ವದ ದಂಗೆಯು ಲಿಬಿಯಾದ ಸರ್ವಾಧಿಕಾರಿ ಗಡಾಫಿಯನ್ನು ಉರುಳಿಸಿದ ನಂತರ ಲಿಬಿಯಾ ಅರಾಜಕತೆಯಲ್ಲಿ ಮುಳುಗಿತು. ತೈಲ ಸಮೃದ್ಧ ರಾಷ್ಟ್ರ ಲಿಬಿಯಾದ ಟ್ರಿಪೋಲಿಯಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರಕಾರ, ಪೂರ್ವ ಪ್ರಾಂತದಲ್ಲಿ ಪ್ರತಿಸ್ಪರ್ಧಿ ಆಡಳಿತದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಎರಡೂ ಸರಕಾರಗಳಿಗೆ ವಿದೇಶಿ ಸರಕಾರಗಳು ಹಾಗೂ ಸಶಸ್ತ್ರ ಪಡೆಗಳ ಬೆಂಬಲವಿದೆ.