ತಪ್ಪಿದ ಮಾರಾಟ ಗುರಿ: ಗಾಝಾದಲ್ಲಿ ಇಸ್ರೇಲ್‌ ಯುದ್ಧವನ್ನು ದೂರಿದ ಮೆಕ್‌ಡೊನಾಲ್ಡ್ಸ್‌

Update: 2024-02-08 11:49 GMT

ಸಾಂದರ್ಭಿಕ ಚಿತ್ರ | Photo: NDTV 

 

ನ್ಯೂಯಾರ್ಕ್‌: ಗಾಝಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ತ್ರೈಮಾಸಿಕ ಮಾರಾಟ ಗುರಿ ತಲುಪಲಾಗಲಿಲ್ಲ ಎಂದು ಮೆಕ್‌ಡೊನಾಲ್ಡ್ಸ್‌ ಹೇಳಿದೆ.

ಈ ಯುದ್ಧವು ಮಧ್ಯ ಪೂರ್ವ ದೇಶಗಳಲ್ಲಿ ಮತ್ತು ಮಲೇಷ್ಯಾ ಹಾಗೂ ಇಂಡೊನೇಷ್ಯಾದಂತಹ ಇತರ ಮುಸ್ಲಿಂ- ಬಾಹುಳ್ಯ ದೇಶಗಳಲ್ಲಿ ಮೆಕ್‌ಡೊನಾಲ್ಡ್ಸ್‌ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸಂಸ್ಥೆಯ ಸಿಇಒ ಕ್ರಿಸ್‌ ಕೆಂಪ್‌ಝಿನ್ಸ್ಕಿ ಹೇಳಿದ್ದಾರೆ.

“ಈ ಸಂಘರ್ಷ, ಈ ಯುದ್ಧ ಮುಂದುವರಿದಷ್ಟು ಸಮಯ ಮಾರಾಟದಲ್ಲಿ ಯಾವುದೇ ಗಣನೀಯ ಸುಧಾರಣೆಯನ್ನು ನಾವು ನಿರೀಕ್ಷಿಸುವುದಿಲ್ಲ,” ಎಂದು ಅವರು ಹೇಳಿದರು.

“ಇದು ಮಾನವ ದುರಂತ, ನಮ್ಮಂತಹ ಬ್ರ್ಯಾಂಡ್‌ಗಳ ಮೇಲೆ ಪರಿಣಾಮ ಬೀರುತ್ತದೆ,” ಎಂದು ಅವರು ಹೇಳಿದರು.

ಮಧ್ಯ ಪೂರ್ವ, ಚೀನಾ ಮತ್ತು ಭಾರತದಲ್ಲಿ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ಮಾರಾಟ ಪ್ರಗತಿ ನಿರೀಕ್ಷೆ ಶೇ5.5ರಷ್ಟಿತ್ತಾದರೂ ದಾಖಲಾದ ಪ್ರಗತಿ ಶೇ0.7 ಗಿತ್ತು.

ಮೆಕ್‌ಡೊನಾಲ್ಡ್ಸ್‌ ಸಂಸ್ಥೆಯ ಇಸ್ರೇಲ್‌ ಶಾಖೆಯು ಇಸ್ರೇಲಿ ಮಿಲಿಟರಿಗೆ ಸಾವಿರಾರು ಉಚಿತ ಊಟಗಳನ್ನು ಒದಗಿಸಿದ್ದನ್ನು ಪ್ರತಿಭಟಿಸಿ ಮುಸ್ಲಿಂ ದೇಶಗಳ ಗ್ರಾಹಕರು ಮೆಕ್‌ಡೊನಾಲ್ಡ್ಸ್‌ ಅನ್ನು ಬಹಿಷ್ಕರಿಸಿದ್ದರಿಂದ ಮಾರಾಟ ಕುಸಿದಿದೆ.

ಇಸ್ರೇಲ್‌ನಲ್ಲಿ ಮೆಕ್‌ಡೊನಾಲ್ಡ್ಸ್‌ ಉಚಿತ ಊಟ ಅಲ್ಲಿನ ಮಿಲಿಟರಿಗೆ ಒದಗಿಸಿದ್ದರಿಂದ ಉಂಟಾದ ವ್ಯತಿರಿಕ್ತ ಪರಿಣಾಮದಿಂದ ಸೌದಿ ಅರೇಬಿಯಾ, ಒಮನ್‌, ಕುವೈತ್‌, ಯುಎಇ, ಜೋರ್ಡನ್‌, ಈಜಿಪ್ಟ್‌, ಬಹರೈನ್‌ ಮತ್ತು ಟರ್ಕಿ ಇಂತಹ ದೇಣಿಗೆಗಳಿಂದ ದೂರ ಉಳಿದು ಗಾಝಾದಲ್ಲಿನ ಫೆಲೆಸ್ತೀನೀಯರಿಗೆ ಲಕ್ಷಾಂತರ ಡಾಲರ್‌ ದೇಣಿಗೆ ನೀಡುವುದಾಗಿ ಜಂಟಿಯಾಗಿ ಘೋಷಿಸಿದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News