ಇರಾಕ್‍ನಲ್ಲಿ ಅಮೆರಿಕ ಸೇನಾನೆಲೆಯ ಮೇಲೆ ಕ್ಷಿಪಣಿ ದಾಳಿ: ವರದಿ
ವಾಷಿಂಗ್ಟನ್, ಜ.21: ಪಶ್ಚಿಮ ಇರಾಕ್‍ನಲ್ಲಿ ಅಮೆರಿಕದ ಸೇನೆಯ ತುಕಡಿಗಳಿರುವ ನೆಲೆಯನ್ನು ಗುರಿಯಾಗಿಸಿ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪು ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಸಿರಿಯಾದ ದಮಾಸ್ಕಸ್‍ನಲ್ಲಿ ಇರಾನ್ ಬೆಂಬಲಿತ ಪಡೆಯ ಮೇಲೆ ಶನಿವಾರ ಇಸ್ರೇಲ್ ನಡೆಸಿದ್ದ ಮಾರಣಾಂತಿಕ ದಾಳಿಗೆ ಸೇಡು ತೀರಿಸಿಕೊಳ್ಳುವ ಹಕ್ಕನ್ನು ಕಾಯ್ದಿರಿಸಿರುವುದಾಗಿ ಇರಾನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ ಇರಾಕ್‍ನಲ್ಲಿ ಅಮೆರಿಕದ ತುಕಡಿಯ ನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆದಿದ್ದು ಇರಾಕ್‍ನ ಓರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾನೆ. ಅಮೆರಿಕದ ಹಲವು ಯೋಧರೂ ಗಾಯಗೊಂಡಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿಕೆ ನೀಡಿದೆ.
ಇರಾಕ್‍ನ ಅಲ್-ಅಸಾದ್ ವಾಯುನೆಲೆಯನ್ನು ಗುರಿಯಾಗಿಸಿ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಇದರಲ್ಲಿ ಬಹುತೇಕ ಕ್ಷಿಪಣಿಗಳನ್ನು ಸೇನಾನೆಲೆಯ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಆದರೆ ಕೆಲವು ಸೇನಾನೆಲೆಗೆ ಅಪ್ಪಳಿಸಿದೆ. ಬಳಿಕ ನೆಲೆಯಲ್ಲಿದ್ದ ಅಮೆರಿಕ ಯೋಧರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಸಂಘಟನೆಯ ವಿರುದ್ಧದ ಹೋರಾಟಕ್ಕೆ ನೆರವಾಗಲು ನಿಯೋಜಿಸಲಾಗಿರುವ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಗಳ ಮೇಲೆ ಅಕ್ಟೋಬರ್ ಬಳಿಕ ದಾಳಿಯ ಪ್ರಕರಣ ಹೆಚ್ಚುತ್ತಿದೆ.