ಭಾರತದ ವಿರುದ್ಧ ಅಪಪ್ರಚಾರಕ್ಕೆ ಪಾಕ್‌ನಿಂದ ವಿಶ್ವಸಂಸ್ಥೆ ವೇದಿಕೆ ದುರ್ಬಳಕೆ ; ಭಾರತದ ಯುಎನ್ ಮುಖ್ಯ ಕಾರ್ಯದರ್ಶಿ ಗೆಹ್ಲೋಟ್ ಆರೋಪ

Update: 2023-09-24 18:21 GMT

Photo:twitter/IndiaUNNewYork

ನ್ಯೂಯಾರ್ಕ್: ಪಾಕಿಸ್ತಾನವು ಅದರ ನೆಲದಲ್ಲಿರುವ ಭಯೋತ್ಪಾದನಾ ಮೂಲಸೌಕರ್ಯಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಭಾರತವು ಶನಿವಾರ ವಿಶ್ವಸಂಸ್ಥೆ (ಯುಎನ್)ಯ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದೆ ಹಾಗೂ ಆ ದೇಶದಲ್ಲಿರುವ ಅಲ್ಪಸಂಖ್ಯಾತರ ಮಾನವಹಕ್ಕುಗಳ ಘೋರ ಉಲ್ಲಂಘನೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಕ್ಕರ್ ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾವಿಸಿದ ಬೆನ್ನಲ್ಲೇ ಭಾರತ ಈ ಪ್ರತಿಕ್ರಿಯೆ ನೀಡಿದೆ.

‘‘ಭಾರತದ ವಿರುದ್ಧ ಆಧಾರರಹಿತ ಹಾಗೂ ದುರುದ್ದೇಶಪೂರಿತ ಅಪಪ್ರಚಾರವನ್ನು ನಡೆಸಲು ವಿಶ್ವಸಂಸ್ಥೆಯಂತಹ ಮಹಾನ್ ವೇದಿಕೆಯನ್ನು ದುರ್ಬಳಕೆ ಮಾಡುವುದು ಪಾಕಿಸ್ತಾನಕ್ಕೆ ಹವ್ಯಾಸವಾಗಿಬಿಟ್ಟಿದೆ’’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರಧಾನ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್ ತಿಳಿಸಿದ್ದಾರೆ.

ಕಕ್ಕರ್ ಅವರ ಭಾಷಣಕ್ಕೆ ಉತ್ತರಿಸುವ ಹಕ್ಕನ್ನು ಬಳಸಿಕೊಂಡು ಗೆಹ್ಲೋಟ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆಯೂ ಭಾರತವು ಪಾಕಿಸ್ತಾನವನ್ನು ಆಗ್ರಹಿಸಿದೆ.

ಇದಕ್ಕೂ ಮುನ್ನ ಪಾಕ್ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಕ್ಕರ್ ಅವರು ವಿಶ್ವಸಂಸ್ಥೆಯ 78ನೇ ಸಾಮಾನ್ಯಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘‘ ಪಾಕಿಸ್ತಾನವು ಭಾರತ ಸೇರಿದಂತೆ ನಮ್ಮ ನೆರೆಹೊರೆಯ ಎಲ್ಲಾ ದೇಶಗಳ ಜೊತೆ ಶಾಂತಿಯುತ ಹಾಗೂ ರಚನಾತ್ಮಕ ಬಾಂಧವ್ಯಗಳನ್ನು ಹೊಂದಲು ಬಯಸುತ್ತಿದೆ. ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜನಾಭಿಪ್ರಾಯ ಸಂಗ್ರಹದ ಮೂಲಕ ಜಮ್ಮುಕಾಶ್ಮೀರ ವಿವಾದಕ್ಕೆ ಅಂತಿಮ ಇತ್ಯರ್ಥವನ್ನು ಕಂಡುಹಿಡಿಯುವ ಭದ್ರತಾ ಮಂಡಳಿಯ ಸಭೆಯ ನಿರ್ಣಯವನ್ನು ಅನುಷ್ಠಾನಕ್ಕೆ ತರುವುದರಿಂದ ಭಾರತವು ತಪ್ಪಿಸಿಕೊಳ್ಳುತ್ತಿದೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News