ಡೊನಾಲ್ಡ್ ಟ್ರಂಪ್ ರ ಮೊದಲ ಅವಧಿಗಿಂತ ಎರಡನೆ ಅವಧಿ ನಿರೀಕ್ಷಿಸಿದ್ದಕ್ಕಿಂತ ಕೆಟ್ಟದಾಗಿದೆ: ಬಹುತೇಕ ಅಮೆರಿಕನ್ನರ ಅಭಿಪ್ರಾಯ

ಡೊನಾಲ್ಡ್ ಟ್ರಂಪ್ | PTI
ವಾಶಿಂಗ್ಟನ್: ಡೊನಾಲ್ಡ್ ಟ್ರಂಪ್ ಎರಡನೆ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳಾಗುತ್ತಿದ್ದು, ಈ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷರ ಕಾರ್ಯನಿರ್ವಹಣೆ ನಿರೀಕ್ಷಿಸಿದ್ದಕ್ಕಿಂತ ತೀರಾ ಕೆಟ್ಟದಾಗಿದೆ ಎಂದು ಶೇ. 41ರಷ್ಟು ಅಮೆರಿಕನ್ನರು ಅಭಿಪ್ರಾಯ ಪಟ್ಟಿದ್ದರೆ, ಶೇ. 30ರಷ್ಟು ಅಮೆರಿಕನ್ನರು ಮಾತ್ರ ತಮ್ಮ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ ಎಂದು ಇತ್ತೀಚೆಗೆ Yohoo News/You Gov ಜಂಟಿಯಾಗಿ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಉಳಿದ ಶೇ. 22ರಷ್ಟು ಅಮೆರಿಕನ್ನರು ಮಾತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 20ರಿಂದ ಮಾರ್ಚ್ 24ರ ನಡುವೆ ನಡೆಸಲಾಗಿರುವ ಸಮೀಕ್ಷೆಯಲ್ಲಿ 1,677 ಅಮೆರಿಕನ್ ಯುವಕರು ಪಾಲ್ಗೊಂಡಿದ್ದು, ಆರ್ಥಿಕ ಅನಿಶ್ಚಿತತೆ ಉಲ್ಬಣಿಸುತ್ತಿರುವುದರಿಂದ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ತಾವು ಮರು ಆಯ್ಕೆಯಾಗುವಾಗ ಹೊಂದಿದ್ದ ರಾಜಕೀಯ ಉತ್ಕರ್ಷವನ್ನು ಕಾಪಾಡಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಣಗಾಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸುತ್ತಿದ್ದಂತೆಯೆ Yahoo News ಮತ್ತು You Gov ಸಂಸ್ಥೆಗಳಿಗೆ ಪ್ರತಿಕ್ರಿಯಿಸಿದ್ದ ಅಮೆರಿಕನ್ನರ ಪೈಕಿ ಶೇ. 51ರಷ್ಟು ಮಂದಿ ಕಳೆದ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ನೀಡಿದ್ದ ಆಡಳಿತವನ್ನು ಅನುಮೋದಿಸಿದ್ದೇವೆ ಎಂದು ತಿಳಿಸಿದ್ದರು. ಇನ್ನುಳಿದ ಶೇ. 43ರಷ್ಟು ಅಮೆರಿಕನ್ನರು ಅವರನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿದ್ದರು. ಆದರೀಗ ಆಗ ಸಂಖ್ಯೆ ಉಲ್ಟಾಪಲ್ಟಾ ಆಗಿದ್ದು, ಡೊನಾಲ್ಡ್ ಟ್ರಂಪ್ ಆಡಳಿತವನ್ನು ತಿರಸ್ಕರಿಸುತ್ತಿರುವವರ ಸಂಖ್ಯೆ ಶೇ. 50ಕ್ಕೆ ಏರಿಕೆಯಾಗಿದ್ದರೆ, ಅವರ ಈಗಿನ ಆಡಳಿತದ ಬಗ್ಗೆ ಸಮ್ಮತಿ ಹೊಂದಿರುವವರ ಸಂಖ್ಯೆ ಶೇ. 44ಕ್ಕೆ ಇಳಿಕೆಯಾಗಿದೆ.
ಇದೇ ರೀತಿ, ಡೊನಾಲ್ಡ್ ಟ್ರಂಪ್ ರನ್ನು ಖಾಸಗಿ ಮಟ್ಟದಲ್ಲಿ ಪ್ರತಿಕೂಲಕರ ವ್ಯಕ್ತಿ ಎಂದು ಶೇ. 52ರಷ್ಟು ಮಂದಿ ಹೇಳಿದ್ದರೆ, ಶೇ. 44ರಷ್ಟು ಅಮೆರಿಕನ್ನರು ಅನುಕೂಲಕರ ವ್ಯಕ್ತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಚುನಾವಣೆಯ ನಂತರ, ಡೊನಾಲ್ಡ್ ಟ್ರಂಪ್ ರ ಅನುಕೂಲಕರ ವ್ಕಕ್ತಿ ಸೂಚ್ಯಂಕವು ಶೇ. 49ಕ್ಕೆ ಏರಿಕೆಯಾಗಿ, ಶೇ. 48ರಷ್ಟಿದ್ದ ಪ್ರತಿಕೂಲಕರ ವ್ಯಕ್ತಿ ಸೂಚ್ಯಂಕವನ್ನು ಕೂದಲೆಳೆಯ ಅಂತರದಲ್ಲಿ ಹಿಂದಿಕ್ಕಿತ್ತು.
ಈ ಅಂಕಿ-ಸಂಖ್ಯೆಗಳು ಡೊನಾಲ್ಡ್ ಟ್ರಂಪ್ ರ ಹನಿಮೂನ್ ಅವಧಿ ಮುಗಿದು ಹೋಗಿದೆ ಎಂಬುದನ್ನೇ ಹೇಳುತ್ತಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಮತ್ತಷ್ಟು ಉತ್ತಮವಾಗಿ ಬದಲಾಯಿಸಲಿದ್ದಾರೆ ಎಂದು ಶೇ. 45ರಷ್ಟು ಅಮೆರಿಕನ್ನರು ಅಭಿಪ್ರಾಯ ಪಟ್ಟಿದ್ದರು. ಇದೇ ವೇಳೆ ಶೇ. 33ರಷ್ಟು ಅಮೆರಿಕನ್ನರು ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಮತ್ತಷ್ಟು ಹಾಳು ಮಾಡಲಿದ್ದಾರೆ ಎಂದು ಹೇಳಿದ್ದರು. ಆದರೆ, ಇದೀಗ ಈ ಪ್ರಮಾಣ ಹೆಚ್ಚುಕಮ್ಮಿ ಒಂದೇ ಹಂತಕ್ಕೆ ತಲುಪಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಮತ್ತಷ್ಟು ಹಾಳುಗೆಡವಲಿದ್ದಾರೆ ಎಂಬ ಅಭಿಪ್ರಾಯ ಹೊಂದಿರುವವರ ಸಂಖ್ಯೆ ಶೇ. 43ಕ್ಕೆ ಏರಿಕೆಯಾಗಿದ್ದರೆ, ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಮತ್ತಷ್ಟು ಉತ್ತಮವಾಗಿ ಬದಲಾಯಿಸಲಿದ್ದಾರೆ ಎಂಬ ಅಭಿಪ್ರಾಯ ಹೊಂದಿರುವವರ ಸಂಖ್ಯೆ ಶೇ. 40ಕ್ಜೆ ಇಳಿಕೆಯಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಪ್ರಜಾಪ್ರಭುತ್ವದೊಂದಿಗೆ ಹೊಂದಿರುವ ಸಂಬಂಧದ ಬಗೆಗಿನ ಅಮೆರಿಕನ್ನರ ಅಭಿಪ್ರಾಯವೂ ಪಲ್ಲಟಗೊಂಡಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ, "ಡೊನಾಲ್ಡ್ ಟ್ರಂಪ್ ಕಟುವಾಗಿ ಮಾತನಾಡಲು ಬಯಸುತ್ತಾರಾದರೂ, ಅವರು ತಮ್ಮ ಎರಡನೆ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವುದಿಲ್ಲ ಎಂದು ಶೇ. 43ರಷ್ಟು ಅಮೆರಿಕನ್ನರು ವಿಶ್ವಾಸ ವ್ಯಕ್ತಪಡಿಸಿದ್ದರೆ, ಶೇ. ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವದ ಪಾಲಿಗೆ ನಿಜವಾದ ಅಪಾಯವಾಗಿದ್ದಾರೆ ಎಂದು ಶೇ. 39ರಷ್ಟು ಅಮೆರಿಕನ್ನರು ಅಭಿಪ್ರಾಯ ಪಟ್ಟಿದ್ದರು.
ಆದರೀಗ, ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವದ ಪಾಲಿಗೆ ನಿಜವಾದ ಅಪಾಯಕಾರಿಯಾಗಿದ್ದಾರೆ ಎಂಬ ಅಭಿಪ್ರಾಯ ಹೊಂದಿರುವ ಅಮೆರಿಕನ್ನರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ. 47ರಷ್ಟು ಮಂದಿ ಆ ನಿಲುವಿಗೆ ತಲುಪಿದ್ದಾರೆ. ಆದರೆ, ಅಂತಹ ಅಭಿಪ್ರಾಯಗಳೆಲ್ಲ ಕೇವಲ ಅಪಪ್ರಚಾರ ಎಂದು ನಿರಾಕರಿಸುವವರ ಪ್ರಮಾಣ ಶೇ. 39ಕ್ಕೆ ಇಳಿಕೆಯಾಗಿದೆ.
ಸಮೀಕ್ಷೆಯ ಪ್ರಕಾರ, ಡೊನಾಲ್ಡ್ ಟ್ರಂಪ್ ರ ಜನಪ್ರಿಯತೆ ಇಳಿಮುಖವಾಗಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಡೊನಾಲ್ಡ್ ಟ್ರಂಪ್ ಕಳೆದ ಒಂದು ದಶಕದಿಂದ ಅಮೆರಿಕ ರಾಜಕಾರಣದ ಮೇಲೆ ಹಿಡಿತ ಸಾಧಿಸಿದ್ದಾರೆ. ಹೀಗಾಗಿ, ಅವರ ಕುರಿತ ಜನಾಭಿಪ್ರಾಯವೂ ಪೂರ್ವನಿರ್ಧಾರಿತ ಹಾಗೂ ಧ್ರುವೀಕರಣಗೊಂಡಿದೆ. ಹೀಗಿದ್ದೂ, ಚುನಾವಣೆ ಮುಕ್ತಾಯಗೊಂಡ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ತಾವು ಹೊಂದಿದ್ದ ಮಾಮೂಲಿ ಅಭಿಪ್ರಾಯಗಳನ್ನು ಕನಿಷ್ಠ ಪಕ್ಷ ಕೆಲವು ಡೆಮಾಕ್ರಟಿಕ್ ಗಳು ಮೃದುವಾಗಿಸಿಕೊಂಡಿದ್ದರು.
ಉದಾಹರಣೆಗೆ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಶೇ. 68ರಷ್ಟು ಡೆಮಾಕ್ರಟಿಕ್ ಗಳು ಅಮೆರಿಕವನ್ನು ಹಾಳುಗೆಡವಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರಿಂದ, ಶೇ. 82ರಷ್ಟು ಡೆಮಾಕ್ರಟಿಕ್ ಗಳು ಡೊನಾಲ್ಡ್ ಟ್ರಂಪ್ ಈಗ ಅದನ್ನೇ ಮಾಡುತ್ತಿರುವುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಕಳೆದ ವರ್ಷ ಡೊನಾಲ್ಡ್ ಟ್ರಂಪ್ ರಿಗೆ ಒಂದು ಅವಕಾಶ ನೀಡಬೇಕು ಎಂಬ ಭಾವನೆಯನ್ನು ಸಾಧಾರಣ ಸಂಖ್ಯೆಯ ಡೆಮಾಕ್ರಟಿಕ್ ಗಳು ಹೊಂದಿದ್ದರು. ಆದರೀಗ, ಡೊನಾಲ್ಡ್ ಟ್ರಂಪ್ ಕಳೆದ ಒಂದು ತಿಂಗಳಲ್ಲಿ ನೀಡಿರುವ ಆಡಳಿದ ಹಿನ್ನೆಲೆಯಲ್ಲಿ ಅವರೆಲ್ಲ ಮತ್ತೆ ಡೊನಾಲ್ಡ್ ಟ್ರಂಪ್ ರನ್ನು ವಿರೋಧಿಸಲು ಪ್ರಾರಂಭಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ರ ಜನಪ್ರಿಯತೆ ಇಳಿಕೆಯಾಗಲು ಎರಡನೆಯ ಮುಖ್ಯ ಕಾರಣ ಅವರದ್ದೇ ಸ್ವಯಂಕೃತಾಪರಾಧವಾಗಿದೆ. ಅದು, ಅವರು ಆರ್ಥಿಕ ಸಮಸ್ಯೆಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಅಥವಾ ಹೇಗೆ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿನ ಇಳಿಕೆಯಾಗಿದೆ.