ತಾಲಿಬಾನ್ ಅಧಿಕಾರ ಹಿಡಿದ ಬಳಿಕ 200ಕ್ಕೂ ಅಧಿಕ ಮಾಜಿ ಅಫ್ಘಾನ್ ಅಧಿಕಾರಿಗಳು, ಯೋಧರ ಹತ್ಯೆ; ವಿಶ್ವಸಂಸ್ಥೆ ವರದಿ

Update: 2023-08-22 16:58 GMT

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಎರಡು ವರ್ಷಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ಚುಕ್ಕಾಣಿಯನ್ನು ಹಿಡಿದ ಬಳಿಕ ಹಿಂದಿನ ಅಫ್ಘಾನ್ ಸರಕಾರದ 200ಕ್ಕೂ ಅಧಿಕ ಸರಕಾರಿ ಅಧಿಕಾರಿಗಳು ಹಾಗೂ ಭದ್ರತಾಪಡೆ ಸಿಬ್ಬಂದಿಯ ಕಾನೂನುಬಾಹಿರ ಹತ್ಯೆಗಳು ನಡೆದಿವೆಯಂದು ವಿಶ್ವಸಂಸ್ಥೆಯ ವರದಿಯೊಂದು ಮಂಗಳವಾರ ತಿಳಿಸಿದೆ.

ಮಾಜಿ ಅಫ್ಘಾನ್ ಆಡಳಿತದಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಹಾಗೂ ಗುಪ್ತಚರ ಪಡೆಗಳ ಅಧಿಕಾರಿಗಳನ್ನು ತಾಲಿಬಾನ್ ತನ್ನ ಗುರಿಯಾಗಿರಿಸಿಕೊಂಡಿತ್ತು ಎಂದು ಅಫ್ಘಾನಿಸ್ತಾನದದಲ್ಲಿನ ವಿಶ್ವಸಂಸ್ಥೆಯ ನೆರವು ಏಜೆನ್ಸಿಯ ವರದಿ ತಿಳಿಸಿದೆ.

ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದ ದಿನವಾದ 2021ರ ಆಗಸ್ಟ್ 15ರಿಂದ ಹಿಡಿದು 2023ರ ಜೂನ್ ಅಂತ್ಯದವರೆಗೆ ಅಫ್ಘಾನಿಸ್ತಾನದ ಮಾಜಿ ಸರಕಾರಿ ಅಧಿಕಾರಿಗಳು, ಭದ್ರತಾಪಡೆಗಳ ನಡುವೆ ವಿರುದ್ಧ ಕನಿಷ್ಠ 800 ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳು ನಡೆದಿವೆಯೆಂದು ‘ಯುಎನ್‌ಎಎಂಎ’ ವರದಿ ತಿಳಿಸಿದೆ.

ಎರಡು ದಶಕಗಳ ದೀರ್ಘ ಯುದ್ಧದ ಆನಂತರ ಅಫ್ಘಾನಿಸ್ತಾನದ ಅಮೆರಿಕ ಹಾಗೂ ನ್ಯಾಟೊ ಪಡೆಗಳು ಕಾಲ್ಕಿತ್ತ ಬಳಿಕ ತಾಲಿಬಾನ್ ದೇಶದ ಅಧಿಕಾರ ಸೂತ್ರವನ್ನು ಹಿಡಿದುಕೊಂಡಿತ್ತು. ಅಮೆರಿಕದಿಂದ ತರಬೇತಿ, ಬೆಂಬಲ ಎರಡನ್ನೂ ಪಡೆದಿದ್ದ ಅಫ್ಘಾನ್ ಪಡೆಗಳು ಹಿಂದೆ ಸರಿದವು ಹಾಗೂ ಆಗಿನ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದು ಪರಾರಿಯಾಗಿದ್ದರು.

‘‘ಕಳೆದ ಎರಡು ವರ್ಷಗಳಿಂದ ತಥಾಕಥಿತ ಅಫ್ಘಾನಿಸ್ತಾನ ಸರಕಾರದ ಭದ್ರತಾಪಡೆಗಳು ವ್ಯಕ್ತಿಗಳನ್ನು ಆಗಾಗ ಸಂಕ್ಷಿಪ್ತ ಅವಧಿಗೆ ಬಂಧನದಲ್ಲಿರಿಸಿ, ಆನಂತರ ಹತ್ಯೆಗೈಯುತ್ತವೆ. ಕೆಲವರನ್ನು ಬಂಧನ ಕೇಂದ್ರಗಳಿಗೆ ಕೊಂಡೊಯುತ್ತವೆ ಹಾಗೂ ಅವರನ್ನು ಕಸ್ಟಡಿಯಲ್ಲಿರುವಾಗಲೇ ಕೊಲೆ ಮಾಡಲಾಗುತ್ತದೆ. ಇನ್ನು ಕೆಲವರನ್ನು ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದು ಹತ್ಯೆಗೈಯಲಾಗುತ್ತದೆ. ಅವರ ಮೃತದೇಹಗಳನ್ನು ಒಂದೋ ಎಸೆಯಲಾಗುತ್ತದೆ ಇಲ್ಲವೇ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ’’ ಎಂದು ವರದಿ ಹೇಳಿದೆ.

ಅಫ್ಘಾನಿಸ್ತಾನದ ಮಾಜಿ ಸರಕಾರ ಹಾಗೂ ಭದ್ರತಾಪಡೆಗಳಿಗೆ ನಿಷ್ಠರಾದ ವ್ಯಕ್ತಿಗಳನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಯ ಕುರಿತಂತೆ ಆಘಾತಕಾರಿ ಚಿತ್ರಣವನ್ನು ಈ ವರದಿಯು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮೀಶನರ್ ವೊಲ್ಕರ್ ಟುರ್ಕ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ತಾಲಿಬಾನ್ ನೇತೃತ್ವದ ಅಫ್ಘಾನ್ ವಿದೇಶಾಂಗ ಸಚಿವಾಲಯವು ಈ ವರದಿಯನ್ನು ತಳ್ಳಿಹಾಕಿದೆ. ತಾಲಿಬಾನ್ ಅಧಿಕಾರಿಗಳಾಗಲಿ ಅಥವಾ ಉದ್ಯೋಗಿಗಳಾಗಲಿ ಮಾನವಹಕ್ಕುಗಳನ್ನು ಉಲ್ಲಂಘಿಸಿರುವ ಯಾವುದೇ ಪ್ರಕರಣಗಳು ತನ್ನ ಅರಿವಿಗೆ ಬಂದಿಲ್ಲವೆಂದು ಅದು ಹೇಳಿದೆ.

ಹಿಂದಿನ ಅಫ್ಘಾನ್ ಸರಕಾರದ ಅಧಿಕಾರಿಗಳು ಮಾನವಹಕ್ಕುಗಳ ಉಲ್ಲಂಘನೆಗೆ ಒಳಗಾಗುವ ಅತ್ಯಧಿಕ ಅಪಾಯವನ್ನು ಎದುರಿಸುತ್ತಿದ್ದಾರೆ. ಪೊಲೀಸರು ಹಾಗೂ ಗುಪ್ತಚರ ಅಧಿಕಾರಿಗಳು ಆನಂತರದ ಸ್ಥಾನದಲ್ಲಿದ್ದಾರೆ. ದೇಶದ 34 ಪ್ರಾಂತಗಳಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದು ,ಈ ಪೈಕಿ ಕಾಬೂಲ್,ಕಂದಹಾರ ಹಾಗೂ ಬಾಲ್ಕ್ ಪ್ರಾಂತ್ಯಗಳು ಮುಂಚೂಣಿಯಲ್ಲಿವೆ.

ತಾಲಿಬಾನ್ ಅಧಿಕಾರವನ್ನು ವಹಿಸಿಕೊಂಡ ಮೊದಲ ನಾಲ್ಕು ತಿಂಗಳುಗಳಲ್ಲಿ ಬಹುತೇಕ ಮಾನವಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ವರದಿಯಾಗಿವೆ. ಮಾಜಿ ಸರಕಾರಿ ಅಧಿಕಾರಿಗಳು ಹಾಗೂ ಅಫ್ಘಾನ್ ಭದ್ರತಾಪಡೆಗಳ ಕಾನೂನು ಬಾಹಿರ ಹತ್ಯೆಗಳಲ್ಲಿ ಹೆಚ್ಚುಕಮ್ಮಿ ಅರ್ಧಾಂಶದಷ್ಟು ಈ ಅವಧಿಯಲ್ಲಿಯೇ ನಡೆದಿವೆಯೆಂದು ಯುಎನ್‌ಎಎಂಎ ವರದಿ ತಿಳಿಸಿದೆ.

ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ಬಳಿಕ 424ಕ್ಕೂ ಅಧಿಕ ಮಾಜಿ ಅಫ್ಘಾನ್ ಸರಕಾರದ ಅಧಿಕಾರಿಗಳು ಹಾಗೂ ಮಾಜಿ ಅಫ್ಘಾನ್ ಭದ್ರತಾಪಡೆ ಸೈನಿಕರ ು ಬಂಧನಗಳು ನಡೆದಿರುವುದನ್ನು ಈ ವರದಿ ದಾಖಲಿಸಿಕೊಂಡಿದೆ. ಚಿತ್ರಹಿಂಸೆ ಹಾಗೂ ಕೆಟ್ಟದಾಗಿ ನಡೆಸಿಕೊಂಡಿರುವ 144 ಪ್ರಕರಣಗಳನ್ನು ಈ ವರದಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News