ಲಿಬಿಯಾ: ದೋಣಿ ಮುಳುಗಿ 60ಕ್ಕೂ ಅಧಿಕ ವಲಸಿಗರ ಸಾವು
ಟ್ರಿಪೋಲಿ: ಲಿಬಿಯಾದ ಕರಾವಳಿಯ ಬಳಿ ದೋಣಿಯೊಂದು ಮುಳುಗಿದ್ದು ದೋಣಿಯಲ್ಲಿದ್ದ 60ಕ್ಕೂ ಅಧಿಕ ವಲಸಿಗರು ನಾಪತ್ತೆಯಾಗಿದ್ದಾರೆ. ಅವರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದೆ ಎಂದು ವಲಸಿಗರಿಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಘಟನೆ(ಐಒಎಮ್) ಶನಿವಾರ ವರದಿ ಮಾಡಿದೆ.
ಲಿಬಿಯಾದ ವಾಯವ್ಯ ಕರಾವಳಿಯ ಝುವಾರಾದಿಂದ ಹೊರಟಿದ್ದ ವಲಸಿಗರ ದೋಣಿ ಸಮುದ್ರದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ದೋಣಿಯಲ್ಲಿ ಸುಮಾರು 86 ವಲಸಿಗರಿದ್ದರು. ಇವರಲ್ಲಿ 25 ಮಂದಿಯನ್ನು ರಕ್ಷಿಸಿ ಲಿಬಿಯಾದ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು ವೈದ್ಯಕೀಯ ನೆರವು ಒದಗಿಸಲಾಗಿದೆ. ಉಳಿದ 61 ಮಂದಿ ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಇವರು ಬದುಕುಳಿದಿರುವ ಸಾಧ್ಯತೆ ಅತ್ಯಲ್ಪವಾಗಿದೆ. ದೋಣಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಐಒಎಮ್ ಹೇಳಿಕೆ ತಿಳಿಸಿದೆ.
ನೈಜೀರಿಯಾ ಮತ್ತಿತರ ಆಫ್ರಿಕಾ ದೇಶಗಳಿಂದ ಲಿಬಿಯಾ ಮತ್ತು ಟ್ಯುನೀಷಿಯಾ ಮೂಲಕ ಯುರೋಪ್ ತಲುಪಲು ವಲಸಿಗರು ಅಪಾಯಕಾರಿ ರೀತಿಯಲ್ಲಿ ಸಣ್ಣ ದೋಣಿಗಳ ಮೂಲಕ ಸಮುದ್ರ ಪ್ರಯಾಣ ನಡೆಸುತ್ತಾರೆ. ಸೆಂಟ್ರಲ್ ಮೆಡಿಟರೇನಿಯನ್ ಜಲ ಮಾರ್ಗದಲ್ಲಿ ಈ ವರ್ಷ 2,250ಕ್ಕೂ ಅಧಿಕ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಐಒಎಮ್ ವಕ್ತಾರ ಫ್ಲಾವಿಯೊ ಡಿ ಗಿಯಾಕೊಮೊರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.