ಕ್ಷುದ್ರಗ್ರಹದ ಮಾದರಿಯಲ್ಲಿ ನೀರು, ಇಂಗಾಲದ ಅಂಶ ಪತ್ತೆ: ನಾಸ ವರದಿ
ಹೂಸ್ಟನ್: 4.5 ಶತಕೋಟಿ ವರ್ಷದ ಹಿಂದಿನ ಕ್ಷುದ್ರಗ್ರಹದಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಹೇರಳವಾದ ನೀರು ಮತ್ತು ಇಂಗಾಲದ ಅಂಶ ಪತ್ತೆಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸ’ ವರದಿ ಮಾಡಿದೆ.
ನಮ್ಮ ಗ್ರಹದ ರಚನೆಗೆ ಪ್ರಮುಖವಾದ ನೀರು ಮತ್ತು ಇಂಗಾಲವು ‘ಬೆನು’ ಎಂದು ಹೆಸರಿಸಲಾದ ಅತ್ಯಂತ ಹಳೆಯ ಕ್ಷುದ್ರಗ್ರಹದ ಮಾದರಿಯಲ್ಲೂ ಕಂಡುಬಂದಿದೆ. ಈ ಸಂಶೋಧನೆಯು ಭೂಮಿಯ ಮೇಲಿನ ಜೀವನಕ್ಕೆ ಅಡಿಪಾಯವನ್ನು ಬಾಹ್ಯಾಕಾಶದಿಂದ ಬಿತ್ತಲಾಗಿದೆ ಎಂಬ ಸಿದ್ಧಾಂತಕ್ಕೆ ಮತ್ತಷ್ಟು ಪುರಾವೆಯನ್ನು ಒದಗಿಸಿದೆ ಎಂದು ನಾಸಾ ಹೇಳಿದೆ. ನೀರು ಹೀರಿಕೊಂಡ ಆವೆಮಣ್ಣಿನ ಖನಿಜದ ರೂಪದಲ್ಲಿ ಹೇರಳವಾದ ನೀರಿನ ಅಂಶವಿರುವುದು ಸ್ಯಾಂಪಲ್ನ ಪ್ರಥಮ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಇದು ಭೂಮಿಗೆ ಹಿಂತಿರುಗಿದ ಅತೀ ದೊಡ್ಡ ಇಂಗಾಲ ಸಮೃದ್ಧ ಕ್ಷುದ್ರಗ್ರಹದ ಮಾದರಿಯಾಗಿದೆ ಎಂದು ನಾಸಾದ ಮುಖ್ಯಸ್ಥ ಬಿಲ್ ನೆಲ್ಸನ್ ಹೇಳಿದ್ದಾರೆ. ‘ಬೆನು’ ಕ್ಷುದ್ರಗ್ರಹದಿಂದ ಕಲ್ಲು ಮತ್ತು ಧೂಳಿನ ಮಾದರಿಯನ್ನು ಬಾಹ್ಯಾಕಾಶ ನೌಕೆ 2020ರಲ್ಲಿ ಸಂಗ್ರಹಿಸಿತ್ತು. ಈ ಅಮೂಲ್ಯ ಮಾದರಿಗಳನ್ನು ಬಾಹ್ಯಾಕಾಶದಿಂದ ಹೊತ್ತು ತಂದ ಗಗನನೌಕೆ ಕೆಲ ವಾರಗಳ ಹಿಂದೆ ಭೂಮಿಗೆ ಹಿಂದಿರುಗಿದೆ.