ಈ ದೇಶದಲ್ಲಿ ವಾಟ್ಸ್ ಆ್ಯಪ್ ಅಡ್ಮಿನ್ ಆಗಲು ಅಂಚೆ ಇಲಾಖೆಗೆ ಪರವಾನಗಿ ಶುಲ್ಕ ಪಾವತಿಸಬೇಕು!
ಹರಾರೆ: ತಮ್ಮ ವಾಟ್ಸ್ ಆ್ಯಪ್ ಗುಂಪುಗಳನ್ನು ನಿರ್ವಹಿಸಲು ಬಯಸುವವರು ಅದಕ್ಕಾಗಿ ಪರವಾನಗಿ ಪಡೆಯಲು ಝಿಂಬಾಬ್ವೆಯ ಅಂಚೆ ಮತ್ತು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಝಿಂಬಾಬ್ವೆ ಸರಕಾರವು ಹೊಸ ನಿಯಮವನ್ನು ಜಾರಿಗೊಳಿಸಿದೆ.
ಈ ಪ್ರಕಟಣೆಯನ್ನು ಝಿಂಬಾಬ್ವೆಯ ಮಾಹಿತಿ, ಸಂಪರ್ಕ ತಂತ್ರಜ್ಞಾನ, ಅಂಚೆ ಹಾಗೂ ಕೊರಿಯರ್ ಸೇವೆಗಳ ಸಚಿವ ತತೇಂದ ಮವೆತೆರ ಹೊರಡಿಸಿದ್ದಾರೆ. ಪರವಾನಗಿ ಶುಲ್ಕದ ಮೊತ್ತ ಕನಿಷ್ಠ ಪಕ್ಷ 50 ಡಾಲರ್ ಆಗಿರಲಿದೆ.
ತಪ್ಪು ಮಾಹಿತಿ ಹರಡುವಿಕೆ ಹಾಗೂ ತೀವ್ರ ಸ್ವರೂಪದ ಅಶಾಂತಿ ಸೃಷ್ಟಿಯನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ಈ ನೂತನ ವಾಟ್ಸ್ ಆ್ಯಪ್ ನಿಯಮವನ್ನು ಜಾರಿಗೆ ತರಲಾಗಿದೆ. ದೇಶದ ದತ್ತಾಂಶ ರಕ್ಷಣೆ ಕಾಯ್ದೆಯನ್ನೂ ಇದರೊಂದಿಗೆ ಸಮನ್ವಯಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿಯನ್ನು ಗುರುತಿಸಲು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೈಯಕ್ತಿಕ ಮಾಹಿತಿ ಸೇರಿದಂತೆ ಯಾವುದೇ ಮಾಹಿತಿಯನ್ನು ಬಳಸಿಕೊಳ್ಳಬಹುದಾಗಿದೆ. ವಾಟ್ಸ್ ಆ್ಯಪ್ ಗುಂಪುಗಳ ಅಡ್ಮಿನ್ ಗಳಿಗೆ ತಮ್ಮ ಸದಸ್ಯರ ಮೊಬೈಲ್ ಸಂಖ್ಯೆಗಳಿಗೆ ನೇರ ಪ್ರವೇಶ ಇರುವುದರಿಂದ, ಅವರು ದತ್ತಾಂಶ ರಕ್ಷಣೆ ಕಾಯ್ದೆಯಡಿ ಬರುತ್ತಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಹಿತಿ ಸಚಿವೆ ಮೋನಿಕಾ ಮುತ್ಸ್ವಾಂಗ್ವಾ, ಪರವಾನಗಿ ನೀತಿಯಿಂದ ತಪ್ಪು ಮಾಹಿತಿಯ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಇದನ್ನು ದತ್ತಾಂಶ ರಕ್ಷಣೆ ಕಾಯ್ದೆಯ ವಿಸ್ತರಿತ ಭಾಗವಾಗಿ ಜಾರಿಗೆ ತರಲಾಗಿದ್ದು, ಇದರ ಪರಿಣಾಮ ಚರ್ಚ್ ಗಳಿಂದ ವ್ಯಾಪಾರದವರೆಗಿನ ಸಂಸ್ಥೆಗಳವರೆಗೆ ಆಗಲಿದೆ ಎಂದು ತಿಳಿಸಿದ್ದಾರೆ.