ಭೀಕರ ಪ್ರವಾಹದಿಂದ ಕಂಗೆಟ್ಟ ದಕ್ಷಿಣ ಸುಡಾನ್; 14 ಲಕ್ಷ ಜನರ ಮೇಲೆ ಪರಿಣಾಮ, 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ
ವಿಶ್ವಸಂಸ್ಥೆ: ದಕ್ಷಿಣ ಸುಡಾನ್‍ನಲ್ಲಿ ವಿನಾಶಕಾರಿ ಪ್ರವಾಹವು ಸುಮಾರು 14 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತಿದೆ, 3,79,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದ್ದು ದೇಶದಲ್ಲಿ ಮಲೇರಿಯಾ ಉಲ್ಬಣಿಸುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.
ಹವಾಮಾನ ಬದಲಾವಣೆ ಸಮಸ್ಯೆಗೆ ಸುಲಭದಲ್ಲಿ ಗುರಿಯಾಗುವ ವಿಶ್ವದ ಅತ್ಯಂತ ಸಣ್ಣ ದೇಶವಾಗಿರುವ ದಕ್ಷಿಣ ಸುಡಾನ್ ದಶಕಗಳಲ್ಲೇ ಅತ್ಯಂತ ಭೀಕರ ಪ್ರವಾಹದ ಹಿಡಿತದಲ್ಲಿದೆ ಎಂದು ನೆರವು ಏಜೆನ್ಸಿಗಳು ಹೇಳಿವೆ. ಹಲವು ರಾಜ್ಯಗಳಲ್ಲಿ ಉಲ್ಬಣಿಸಿರುವ ಮಲೇರಿಯಾ ಪ್ರಕರಣಗಳನ್ನು ನಿರ್ವಹಿಸಲು ಆರೋಗ್ಯ ವ್ಯವಸ್ಥೆ ಹೆಣಗಾಡುತ್ತಿದೆ. ಪ್ರವಾಹದಿಂದ ಜರ್ಝರಿತಗೊಂಡ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಏಜೆನ್ಸಿ ಒಸಿಎಚ್‍ಎ ಹೇಳಿದೆ.
2011ರಲ್ಲಿ ಸುಡಾನ್‍ನಿಂದ ಸ್ವಾತಂತ್ರ್ಯ ಪಡೆದ ನಂತರ, ದಕ್ಷಿಣ ಸುಡಾನ್ ದೀರ್ಘಕಾಲದ ಅಸ್ಥಿರತೆ, ಹಿಂಸಾಚಾರ, ಆರ್ಥಿಕ ನಿಶ್ಚಲತೆ, ಬರ ಮತ್ತು ಪ್ರವಾಹಗಳಂತಹ ಹವಾಮಾನ ಸಂಬಂಧಿತ ವಿಪತ್ತುಗಳೊಂದಿಗೆ ಹೋರಾಡುತ್ತಿದೆ. ಪ್ರವಾಹವು 43 ದೇಶಗಳ ಮೇಲೆ ಪರಿಣಾಮ ಬೀರಿದೆ.
ಇತ್ತೀಚಿನ ಪ್ರವಾಹಗಳು `ತೀವ್ರವಾದ ಆಹಾರ ಅಭದ್ರತೆ, ಆರ್ಥಿಕ ಕುಸಿತ, ಮುಂದುವರಿದ ಸಂಘರ್ಷ, ರೋಗಗಳ ಉಲ್ಬಣ ಮತ್ತು ಸುಡಾನ್ ಸಂಘರ್ಷದ ಪರಿಣಾಮಗಳಿಂದ ದಿಕ್ಕೆಟ್ಟಿರುವ ನಿರ್ಣಾಯಕ ಮಾನವೀಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ವಿಶ್ವಬ್ಯಾಂಕ್ ಕಳೆದ ತಿಂಗಳು ಹೇಳಿದೆ. ಸುಡಾನ್ ಸಂಘರ್ಷದಿಂದ ಸಾವಿರಾರು ಮಂದಿ ದಕ್ಷಿಣ ಸುಡಾನ್‍ಗೆ ಪಲಾಯನ ಮಾಡಿದ್ದಾರೆ. ದಕ್ಷಿಣ ಸುಡಾನ್‍ನಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಆಹಾರದ ಅಭದ್ರತೆ ಎದುರಿಸುತ್ತಿದ್ದಾರೆ ಮತ್ತು 16.5 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಮೂಲಗಳು ಹೇಳಿವೆ. ಈ ಮಧ್ಯೆ, ದೇಶದಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಮತ್ತೆ 2 ವರ್ಷ (2026ರ ಡಿಸೆಂಬರ್) ಮುಂದೂಡಿರುವುದಾಗಿ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿರುವುದು ದೇಶದಲ್ಲಿನ ರಾಜಕೀಯ ಅಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ದಕ್ಷಿಣ ಸುಡಾನ್‍ನ ಪಾಲುದಾರ ದೇಶಗಳು ಹಾಗೂ ವಿಶ್ವಸಂಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಇದು ವಿಷಾದನೀಯ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿ ನಿಕೊಲಸ್ ಹೇಸಮ್ ಖಂಡಿಸಿದ್ದಾರೆ.
ದಕ್ಷಿಣ ಸುಡಾನ್‍ನ ಜೋಂಗ್ಲೆ, ಯುನಿಟಿ, ಅಪ್ಪರ್ ನೈಲ್, ಉತ್ತರ ಬಾಹ್ರ್‍ಎಲ್ ಘಜಲ್, ಮಧ್ಯ ಇಕ್ವೆಟೋರಿಯಾ ಮತ್ತು ಪಶ್ಚಿಮ ಇಕ್ವೆಟೋರಿಯಾ ರಾಜ್ಯಗಳಲ್ಲಿ ಮಲೇರಿಯಾ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳ ವರದಿಯಾಗಿದ್ದು ಇದು ಆರೋಗ್ಯ ವ್ಯವಸ್ಥೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.