ಗಾಝಾ | ಇಸ್ರೇಲ್ ದಾಳಿಯಲ್ಲಿ 11 ಫೆಲೆಸ್ತೀನೀಯರ ಮೃತ್ಯು

Update: 2024-11-11 17:02 GMT

PC : aljazeera.com

ಗಾಝಾ : ಗಾಝಾ ಪಟ್ಟಿಯಲ್ಲಿ ರವಿವಾರ ರಾತ್ರಿಯಿಂದ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನ್ ನ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ.

ಈ ಮಧ್ಯೆ, ಇಸ್ರೇಲ್ ಪಡೆ ನುಸೀರಾತ್ ನಿರಾಶ್ರಿತರ ಶಿಬಿರ ಪ್ರದೇಶದ ಪಶ್ಚಿಮ ಬದಿಯಿಂದ ಟ್ಯಾಂಕ್ ಗಳನ್ನು ನುಗ್ಗಿಸಿದ್ದು ಟ್ಯಾಂಕ್ ಗಳು ಗುಂಡಿನ ದಾಳಿ ನಡೆಸುತ್ತಾ ಮುನ್ನುಗ್ಗಿದಾಗ ಸ್ಥಳೀಯ ನಿವಾಸಿಗಳು ಗಾಭರಿಗೊಂಡರು. ಶಿಬಿರದ ಕೆಲವು ಮನೆಗಳನ್ನು ಟ್ಯಾಂಕ್ ಗಳು ನೆಲಸಮಗೊಳಿಸಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನುಸೀರಾತ್ ನಲ್ಲಿ ಇಸ್ರೇಲ್ ಪಡೆ ನಡೆಸಿದ ಎರಡು ಪ್ರತ್ಯೇಕ ವೈಮಾನಿಕ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಉತ್ತರ ಗಾಝಾದ ಬಿಯೆತ್ ಲಹಿಯಾ ನಗರದಲ್ಲಿ ಇಸ್ರೇಲ್ ನ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಕಮಲ್ ಅದ್ವಾನ್ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಬಾಲಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ಮೂರು ಆಸ್ಪತ್ರೆಗಳನ್ನು ಹಲವು ದಿನಗಳಿಂದ ಸುತ್ತುವರಿದಿದೆ. ಆದರೆ ಆಸ್ಪತ್ರೆಯಿಂದ ಸ್ಥಳಾಂತರಗೊಳ್ಳಬೇಕೆಂಬ ಇಸ್ರೇಲ್ ಪಡೆಯ ಆದೇಶವನ್ನು ಆಸ್ಪತ್ರೆಗಳ ಸಿಬಂದಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News