ದಕ್ಷಿಣ ಚೀನಾ ಸಮುದ್ರದ ಹಕ್ಕು ಬಿಟ್ಟುಕೊಡಲು ಚೀನಾದ ಒತ್ತಡ : ಫಿಲಿಪ್ಪೀನ್ಸ್
ಕ್ಯಾನ್‍ಬೆರಾ : ದಕ್ಷಿಣ ಚೀನಾ ಸಮುದ್ರದಲ್ಲಿ ಸಾರ್ವಭೌಮ ಹಕ್ಕುಗಳನ್ನು ಬಿಟ್ಟುಕೊಡಲು ಫಿಲಿಪ್ಪೀನ್ಸ್ ಮೇಲೆ ಚೀನಾ ಭಾರೀ ಒತ್ತಡ ಹೇರುತ್ತಿದೆ ಎಂದು ಫಿಲಿಪ್ಪೀನ್ಸ್ ನ ರಕ್ಷಣಾ ಕಾರ್ಯದರ್ಶಿ ಗಿಲ್ಬರ್ಟೊ ಟಿಯೊಡೊರೊ ಮಂಗಳವಾರ ಹೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ ಟಿಯೊಡೊರೊ, ಕ್ಯಾನ್‍ಬೆರಾದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಸ್ ಜತೆ ಮಾತುಕತೆ ನಡೆಸಿದರು. `ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನಮ್ಮ ಸಾರ್ವಭೌಮ ಹಕ್ಕನ್ನು ಬಿಟ್ಟುಕೊಡುವಂತೆ ಚೀನಾದ ಒತ್ತಡ ಹೆಚ್ಚುತ್ತಿದೆ. ಫಿಲಿಪ್ಪೀನ್ಸ್ ಚೀನೀ ಆಕ್ರಮಣದ ಬಲಿಪಶುವಾಗಿತ್ತು. ಚೀನಾದ ಪ್ರತಿಪಾದನೆ ಮತ್ತು ವರ್ತನೆ ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಆಸ್ಟ್ರೇಲಿಯಾದಂತಹ ಪಾಲುದಾರರೊಂದಿಗೆ ರಕ್ಷಣಾ ಒಪ್ಪಂದವು ಚೀನಾದ ಅತಿಕ್ರಮಣಗಳನ್ನು ತಡೆಯಲು ಪ್ರಮುಖ ಮಾರ್ಗವಾಗಿದೆ' ಎಂದವರು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಕ್ರಮಗಳು ಅಂತರಾಷ್ಟ್ರೀಯ ಕಾನೂನಿನ ಪ್ರಕಾರವೇ ಇದೆ ಎಂದು ಚೀನಾ ಸಮರ್ಥಿಸಿಕೊಳ್ಳುತ್ತಿದ್ದರೂ ಇದು ಸತ್ಯವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಅವರ ಕೃತ್ಯವನ್ನು ಯಾರೊಬ್ಬರೂ ಬೆಂಬಲಿಸದಿರುವುದು ಇದಕ್ಕೆ ಬಹುದೊಡ್ಡ ಪುರಾವೆಯಾಗಿದೆ ಎಂದು ಫಿಲಿಪ್ಪೀನ್ಸ್ ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ. ಫಿಲಿಪ್ಪೀನ್ಸ್ ನ ರಕ್ಷಣಾ ಉದ್ಯಮದ ಜತೆ ಹೆಚ್ಚು ನಿಕಟವಾಗಿ ಕೆಲಸ ಮಾಡಲು ಬಯಸಿದೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಆ ದೇಶಕ್ಕೆ ಇಂಜಿನಿಯರಿಂಗ್ ಮೌಲ್ಯಮಾಪನ ತಂಡವನ್ನು ಕಳುಹಿಸುತ್ತದೆ ಎಂದು ರಿಚರ್ಡ್ ಮಾರ್ಸ್ ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ವಿವಾದಿತ ಪ್ರದೇಶಗಳ ಕುರಿತು ಚೀನಾ ಮತ್ತು ಫಿಲಿಪ್ಪೀನ್ಸ್ ಈ ವರ್ಷ ಪದೇ ಪದೇ ಕಿತ್ತಾಡಿಕೊಂಡಿವೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಗೆ ಸಂಬಂಧಿಸಿ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಖಂಡಿಸಿರುವ ಆಸ್ಟ್ರೇಲಿಯಾ 2023ರ ಸೆಪ್ಟಂಬರ್‍ನಲ್ಲಿ ಫಿಲಿಪ್ಪೀನ್ಸ್ ಜತೆ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು ಕೆಲ ತಿಂಗಳ ಬಳಿಕ ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್ ಜತೆ ಜಂಟಿ ಸಮುದ್ರ ಮತ್ತು ವಾಯು ಗಸ್ತುಗಳನ್ನು ನಡೆಸಿದೆ.