ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕ್ ವಾಟ್ಸ್ ಆಯ್ಕೆ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಫ್ಲೋರಿಡಾ ಪ್ರತಿನಿಧಿ ಮೈಕ್ ವಾಟ್ಸ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಅಮೆರಿಕ ಸೇನೆಯ ಗ್ರೀನ್ ಬೆರೆಟ್ ಆಗಿದ್ದ ವಾಟ್ಸ್, ಚೀನಾದ ಕಟು ಟೀಕಾಕಾರರಾಗಿ ಗುರುತಿಸಿಕೊಂಡವರು. ಟ್ರಂಪ್ ಅವರ ಕಟ್ಟಾ ಬೆಂಬಲಿಗ ಮತ್ತು ರಾಷ್ಟ್ರೀಯ ಗಾರ್ಡ್‍ನ ಕರ್ನಲ್ ಆಗಿ ಕಾರ್ಯ ನಿರ್ವಹಿಸಿರುವ ಇವರು, ಏಷ್ಯಾ-ಫೆಸಿಫಿಕ್ ಪ್ರದೇಶದಲ್ಲಿ ಚೀನಿ ಚಟುವಟಿಕೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು ಮತ್ತು ಸಂಭಾವ್ಯ ಪ್ರಾದೇಶಿಕ ಸಂಘರ್ಷಕ್ಕೆ ಅಮೆರಿಕ ಸರ್ವಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಒತ್ತಿಹೇಳಿದ್ದರು.
ರಾಷ್ಟ್ರೀಯ ಭದ್ರತಾ ಸಲಹಗಾರರ ಹುದ್ದೆಗೆ ಸೆನೆಟ್‍ನ ಅನುಮೋದನೆ ಬೇಕಿಲ್ಲವಾದರೂ, ಈ ಹುದ್ದೆ ಮಹತ್ವದ ಪ್ರಭಾವವನ್ನು ಹೊಂದಿರುತ್ತದೆ. ತಮ್ಮ ಹೊಸ ಪಾತ್ರದಲ್ಲಿ ವಾಟ್ಸ್, ರಾಷ್ಟ್ರೀಯ ಭದ್ರತಾ ವಿಚಾರಗಳ ಬಗ್ಗೆ ಟ್ರಂಪ್‍ಗೆ ಸಲಹೆ ನೀಡುವ ಜತೆಗೆ ಅಂತರ್ ಏಜೆನ್ಸಿ ಸಮನ್ವಯಕ್ಕೆ ಸೌಲಭ್ಯ ಕಲ್ಪಿಸಲಿದ್ದಾರೆ.
ಅಪ್ಘಾನಿಸ್ತಾನದಿಂದ 2021ರಲ್ಲಿ ಅಮೆರಿಕ ಸೇನೆಯನ್ನು ಹಿಂದಕ್ಕೆ ಪಡೆದ ಬೈಡೇನ್ ಕ್ರಮವನ್ನು ಕಟುವಾಗಿ ಟೀಕಿಸಿದ್ದ ಅವರು, ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ಬೆಂಬಲಿಸುತ್ತಾ ಬಂದವರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಗಳಾದ ಡೊನಾಲ್ಡ್ ರಮ್ಸ್‍ಫೆಡ್ ಮತ್ತು ರಾಬರ್ಟ್ ಗೇಟ್ಸ್ ಅವಧಿಯಲ್ಲಿ ರಕ್ಷಣಾ ನೀತಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅಮೆರಿಕ ಕಾಂಗ್ರೆಸ್‍ಗೆ 2018ರಲ್ಲಿ ಆಯ್ಕೆಯಾದ ಅವರು, ಮಿಲಿಟರಿ ಲಾಜಿಸ್ಟಿಕ್ಸ್ ಬಗೆಗಿನ ಸಶಸ್ತ್ರ ಸೇವೆಗಳ ಉಪಸಮಿತಿ ಅಧ್ಯಕ್ಷರಾಗಿ ಮತ್ತು ಗುಪ್ತಚರ ಆಯ್ದ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು.