ನೆದರ್‌ ಲ್ಯಾಂಡ್‌ ನಲ್ಲಿ ಮತ್ತೆ ಇಸ್ರೇಲ್ ವಿರೋಧಿ ಹಿಂಸಾಚಾರ ; ಟ್ರಾಮ್‍ಗೆ ಬೆಂಕಿ, ಹಲವು ವಾಹನಗಳು ಧ್ವಂಸ

Update: 2024-11-12 16:05 GMT

PC : PTI

ಆಮ್‍ಸ್ಟರ್‍ಡಾಂ : ನೆದರ್ಲ್ಯಾಂಡ್ ರಾಜಧಾನಿ ಆಮ್‍ಸ್ಟರ್‍ಡಾಂನಲ್ಲಿ ಸೋಮವಾರ ರಾತ್ರಿ ಮತ್ತೆ ಇಸ್ರೇಲ್ ವಿರೋಧಿ ಹಿಂಸಾಚಾರ ಭುಗಿಲೆದ್ದಿದ್ದು ಗಲಭೆಕೋರರು ಸ್ಫೋಟಕಗಳನ್ನು ಸಿಡಿಸಿ ಟ್ರಾಮ್‍ಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ `ದಿ ಜೆರುಸಲೇಂ ಪೋಸ್ಟ್' ಮಂಗಳವಾರ ವರದಿ ಮಾಡಿದೆ.

ಕಳೆದ ವಾರ ಆಮ್‍ಸ್ಟರ್‍ಡಾಂನಲ್ಲಿ ನಡೆದ ಯುರೋಪಾ ಲೀಗ್ ಫುಟ್‍ಬಾಲ್ ಟೂರ್ನಿಯಲ್ಲಿ ಸ್ಥಳೀಯ ಅಜಾಕ್ಸ್ ಕ್ಲಬ್ ಹಾಗೂ ಇಸ್ರೇಲ್‍ನ ಮಕಾಬಿ ಕ್ಲಬ್ ನಡುವಿನ ಪಂದ್ಯದ ಬಳಿಕ ಇಸ್ರೇಲ್ ತಂಡದ ಆಟಗಾರರು ಹಾಗೂ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿತ್ತು. ಸೋಮವಾರ ತಡರಾತ್ರಿ ನಡೆದ ಹಿಂಸಾಚಾರ ಈ ಘಟನೆಯ ಮುಂದುವರಿದ ಭಾಗವಾಗಿದೆ. ಕಪ್ಪು ಬಟ್ಟೆ ಧರಿಸಿದ್ದ ಗಲಭೆಕೋರರು ಸ್ಫೋಟಕಗಳನ್ನು ಸಿಡಿಸಿ ನಗರದಲ್ಲಿನ ಜನಪ್ರಿಯ ಟ್ರಾಮ್‍ಗೆ ಬೆಂಕಿ ಹಚ್ಚಿದ್ದಾರೆ. ಆದರೆ ಟ್ರಾಮ್‍ನಲ್ಲಿ ಯಾರೂ ಇರದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿ ಹೇಳಿದೆ.

`ಯಹೂದಿ ಕ್ಯಾನ್ಸರ್ ಗಳು' ಎಂದು ಘೋಷಣೆ ಕೂಗುತ್ತಿದ್ದ ಗಲಭೆಕೋರರು ಪೊಲೀಸರತ್ತ ಕಲ್ಲು, ಇಟ್ಟಿಗೆಗಳನ್ನು ಎಸೆದು ಘರ್ಷಣೆಗೆ ಇಳಿದರು. ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡು ಪ್ರಮುಖ ರಸ್ತೆಗಳಲ್ಲಿ ಅಡ್ಡಾಡುತ್ತಾ `ಫೆಲೆಸ್ತೀನ್ ಸ್ವತಂತ್ರವಾಗಲಿ' ಎಂದು ಘೋಷಣೆ ಕೂಗಿದರು. ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಹಲವು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

►ಬರ್ಲಿನ್‍ನಲ್ಲಿ ಯಹೂದಿ ಫುಟ್‍ಬಾಲ್ ತಂಡದ ಮೇಲೆ ಹಲ್ಲೆ

ಈ ಮಧ್ಯೆ, ಜರ್ಮನಿಯ ಬರ್ಲಿನ್‍ನಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 17ರ ಕೆಳಹರೆಯದ ಯೆಹೂದಿ ಫುಟ್‍ಬಾಲ್ ತಂಡ `ತುಸ್ ಮಕಾಬಿ ಬರ್ಲಿನ್'ನ ಆಟಗಾರರ ಮೇಲೆ ಗುಂಪೊಂದು ಚೂರಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಯೆಹೂದಿ ತಂಡದ ಆಟಗಾರರು ಪಂದ್ಯದ ಬಳಿಕ ಕ್ರೀಡಾಂಗಣದಿಂದ ಹೊರ ಹೋಗುತ್ತಿದ್ದಾಗ ಗುಂಪೊಂದು ಅಟ್ಟಾಡಿಸಿ ಹಲ್ಲೆ ನಡೆಸಿತ್ತು. ಪಂದ್ಯದ ಸಂದರ್ಭ ಎದುರಾಳಿ ತಂಡದ ಕೆಲವರು ಫೆಲೆಸ್ತೀನ್ ಪರ ಘೋಷಣೆ ಕೂಗಿದ್ದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ. ಆಗ ರೆಫರೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಸ್ರೇಲ್ ತಂಡ ಆರೋಪಿಸಿದೆ. ಆಟದ ಸಂದರ್ಭ ಎದುರಾಳಿ ತಂಡದ ಆಟಗಾರರನ್ನು ನಿಂದಿಸಿದವರನ್ನು ತಂಡದಿಂದ ಉಚ್ಛಾಟಿಸಲಾಗುವುದು. ಆಟದಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡುವುದಿಲ್ಲ' ಎಂದು ಅಧಿಕಾರಿಗಳು ಹೇಳಿರುವುದಾಗಿ `ದಿ ಟೆಲಿಗ್ರಾಫ್' ವರದಿ ಮಾಡಿದೆ. 

► ಇಸ್ರೇಲಿ ಆಟಗಾರರ ಮೇಲೆ ಹಲ್ಲೆ : ಮತ್ತೆ ಐದು ಮಂದಿಯ ಬಂಧನ  

  ಕಳೆದ ವಾರ ಇಸ್ರೇಲ್ ಫುಟ್‍ಬಾಲ್ ತಂಡದ ಆಟಗಾರರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಮತ್ತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ನೆದರ್‌ ಲ್ಯಾಂಡ್‌ ಪೊಲೀಸರು ಸೋಮವಾರ ಹೇಳಿದ್ದಾರೆ.

ಸೋಮವಾರ ಬಂಧಿಸಲಾದ ಶಂಕಿತ ಆರೋಪಿಗಳು 18ರಿಂದ 37 ವರ್ಷದೊಳಗಿನವರು ಮತ್ತು ನೆದರ್‌ ಲ್ಯಾಂಡ್‌ ಪ್ರಜೆಗಳು. ಇದರೊಂದಿಗೆ ಹಲ್ಲೆ, ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟವರ ಸಂಖ್ಯೆ 68ಕ್ಕೆ ಏರಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಾರಾಂತ್ಯ ಆಮಸ್ಟರ್‍ಡಾಂನಲ್ಲಿ ಇಸ್ರೇಲಿಗಳು ಮತ್ತು ಯೆಹೂದಿಗಳ ವಿರುದ್ಧ ನಡೆದ ದಾಳಿ ಆಘಾತಕಾರಿ ಮತ್ತು ಖಂಡನೀಯ. ಹಿಂಸಾಚಾರದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಹಿಂಸಾಚಾರಕ್ಕೂ ಮುನ್ನ ಹಾಗೂ ಬಳಿಕ ನಡೆದ ಘಟನೆಗಳ ವಿವರಗಳನ್ನು ಪ್ರಾಸಿಕ್ಯೂಟರ್ ಗಳು ಮತ್ತು ಪೊಲೀಸರು ಒಟ್ಟುಗೂಡಿಸುತ್ತಿದ್ದಾರೆ ಎಂದು ನೆದರ್‌ ಲ್ಯಾಂಡ್‌ ಪ್ರಧಾನಿ ಡಿಕ್ ಸ್ಕೂಫ್ ಹೇಳಿದ್ದಾರೆ.

ಇಸ್ರೇಲಿ ಆಟಗಾರರು ಹಾಗೂ ತಂಡದ ಬೆಂಬಲಿಗರ ಮೇಲೆ ನಡೆದ ದಾಳಿಯಲ್ಲಿ ಐದು ಮಂದಿ ಗಾಯಗೊಂಡಿದ್ದರು. ದಾಳಿಯ ಬಳಿಕ ವಿಶೇಷ ವಿಮಾನದಲ್ಲಿ ಆಟಗಾರರು ಹಾಗೂ ಬೆಂಬಲಿಗರನ್ನು ಇಸ್ರೇಲ್ ಸ್ವದೇಶಕ್ಕೆ ಕರೆಸಿಕೊಂಡಿತ್ತು. ಈ ಮಧ್ಯೆ, ಇಸ್ರೇಲ್ ಫುಟ್‍ಬಾಲ್ ತಂಡದ ಅಭಿಮಾನಿಗಳು ಬುಧವಾರ ಆಮ್‍ಸ್ಟರ್‍ಡಾಂನಲ್ಲಿ ಟ್ಯಾಕ್ಸಿಯೊಂದಕ್ಕೆ ದಾಳಿ ನಡೆಸಿದ್ದರಲ್ಲದೆ ಪೆಲೆಸ್ತೀನ್ ಧ್ವಜವನ್ನು ಸುಟ್ಟು ಹಾಕಿದ್ದರು. ಮರುದಿನ ಪಂದ್ಯ ನಡೆಯುತ್ತಿದ್ದಾಗಲೂ ಇಸ್ರೇಲ್ ತಂಡದ ಅಭಿಮಾನಿಗಳು ಅರಬ್ ವಿರೋಧಿ ಘೋಷಣೆ ಕೂಗುತ್ತಿದ್ದುದು ವೀಡಿಯೊದಲ್ಲಿ ಸೆರೆಯಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News