ಅಮೆರಿಕ ಸಂಸತ್ | ರಿಪಬ್ಲಿಕನ್ ಪಕ್ಷಕ್ಕೆ ಬಹುಮತ
ವಾಷಿಂಗ್ಟನ್ : ಹೌಸ್ ಆಫ್ ರೆಪ್ರಸೆಂಟೇಟಿವ್ಸ್(ಅಮೆರಿಕ ಸಂಸತ್‍ನ ಕೆಳಮನೆ)ಯಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಪಡೆಯುವುದರೊಂದಿಗೆ ಒಂದೇ ಪಕ್ಷವು ಸಂಸತ್ ನ ಎರಡೂ ಸದನಗಳಲ್ಲಿ ಬಹುಮತ ಪಡೆಯುವ ಜತೆಗೆ ಅಧ್ಯಕ್ಷ ಹುದ್ದೆಯನ್ನೂ ಪಡೆದ ಅಪರೂಪದ ಸಾಧನೆ ತೋರಿದೆ.
ಅರಿಝೋನಾ ರಾಜ್ಯದ 6ನೇ ಜಿಲ್ಲಾ ಕ್ಷೇತ್ರದಿಂದ ರಿಪಬ್ಲಿಕನ್ ಅಭ್ಯರ್ಥಿ ಜುವಾನ್ ಸಿಸ್ಕೊಮನಿ ಗೆಲುವು ಸಾಧಿಸುವುದರೊಂದಿಗೆ 435 ಸದಸ್ಯ ಬಲದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ರಿಪಬ್ಲಿಕನ್ನರು 218 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು ತಲುಪಿದರು. ಡೆಮಾಕ್ರಟಿಕ್ ಪಕ್ಷ 209 ಸ್ಥಾನ ಗಳಿಸಿರುವುದಾಗಿ ವರದಿಯಾಗಿದೆ. 100 ಸದಸ್ಯ ಬಲದ ಸೆನೆಟ್(ಸಂಸತ್‍ನ ಮೇಲ್ಮನೆ)ನಲ್ಲಿ ರಿಪಬ್ಲಿಕನ್ ಪಕ್ಷ 52 ಸದಸ್ಯರನ್ನು ಡೆಮಾಕ್ರಟಿಕ್ ಪಕ್ಷ 46 ಸದಸ್ಯರನ್ನು ಹೊಂದಿದೆ.
ಇದರೊಂದಿಗೆ ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಅನಿಯಮಿತ ಶಕ್ತಿಯನ್ನು ಹೊಂದಲಿದ್ದಾರೆ. ಈಗಿನ ಅಧ್ಯಕ್ಷ ಜೋ ಬೈಡನ್ ಅವರ ಡೆಮಾಕ್ರಟಿಕ್ ಪಕ್ಷ ಸೆನೆಟ್ ನಲ್ಲಿ ಬಹುಮತ ಪಡೆದಿರದ ಕಾರಣ ಕೆಲವು ಮಹತ್ವದ ಕಾಯ್ದೆಗಳಿಗೆ ಸದನದ ಅನುಮೋದನೆ ಪಡೆಯಲು ವಿಫಲವಾಗಿದ್ದರು.