ʼಎಕ್ಸ್' ನಿಷೇಧದ ಕಾರಣ ಟ್ರಂಪ್‍ರನ್ನು ಅಭಿನಂದಿಸಲು ವಿಪಿಎನ್ ಬಳಸಿ ಟ್ರೋಲ್ ಗೊಳಗಾದ ಪಾಕ್ ಪ್ರಧಾನಿ ಷರೀಫ್
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮ `ಎಕ್ಸ್'(ಟ್ವಿಟರ್) ಬಳಕೆಯನ್ನು ನಿಷೇಧಿಸಿರುವುದರಿಂದ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡ ಟ್ರಂಪ್‍ರನ್ನು ಅಭಿನಂದಿಸಲು ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ವಿಪಿಎನ್ ಬಳಸಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್) ಇಂಟರ್ನೆಟ್ ಮೂಲಕ ಸಾಧನಗಳ ನಡುವೆ ಖಾಸಗಿ ನೆಟ್‍ವರ್ಕ್ ಸಂಪರ್ಕವನ್ನು ಸಾಧಿಸುತ್ತದೆ.
`ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಐತಿಹಾಸಿಕ ವಿಜಯ ದಾಖಲಿಸಿರುವುದಕ್ಕೆ ಅಭಿನಂದನೆಗಳು. ಪಾಕಿಸ್ತಾನ-ಅಮೆರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಹೊಸ ಆಡಳಿತದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಷರೀಫ್ ನವೆಂಬರ್ 6ರಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ` ತನ್ನ ಸರಕಾರವೇ ನಿಷೇಧಿಸಿರುವ , ಪಾಕಿಸ್ತಾನದಲ್ಲಿ ಕಾನೂನು ಬಾಹಿರವಾದ `ಎಕ್ಸ್'ನಲ್ಲಿ ಪೋಸ್ಟ್ ಮಾಡಲು ಪ್ರಧಾನಿ ಷರೀಫ್ ವಿಪಿನ್ ಬಳಸಿದ್ದಾರೆ' ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಷರೀಫ್ ಸರಕಾರ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ `ಎಕ್ಸ್'ಗೆ ನಿಷೇಧ ವಿಧಿಸಿತ್ತು. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ಉಗ್ರಗಾಮಿಗಳು ದೇಶವಿರೋಧಿ ಚಟುವಟಿಕೆಗಳನ್ನು ಹರಡಲು ವೇದಿಕೆಯನ್ನು ಬಳಸುತ್ತಿದ್ದರು ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಪ್ರತಿಪಾದಿಸಿದ್ದರು.