ಟ್ವೀಟ್ ಗಳನ್ನು ನೋಡಲು ಸೈನ್‌ಇನ್ ಕಡ್ಡಾಯ: ನೂತನ ನಿಯಮ ಹೇರಿದ ಎಲಾನ್ ಮಸ್ಕ್ ಮಾಲಕತ್ವದ ಟ್ವಿಟರ್
ನ್ಯೂಯಾರ್ಕ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ಹಲವಾರು ಬದಲಾವಣೆಗಳಿಗೆ ಒಳಗಾಗಿದೆ. ನೂತನ ಬ್ಲೂಟಿಕ್ ವ್ಯವಸ್ಥೆ, ಚಂದಾದಾರಿಕೆ ವ್ಯವಸ್ಥೆ ಮುಂತಾದ ಹಲವಾರು ವಿಭಿನ್ನತೆಗಳನ್ನು ಟ್ವಿಟರ್ ಮಾಡಿತ್ತು. ಇದೀಗ ಸಂಸ್ಥೆಯು ಬಳಕೆದಾರರ ಮೇಲೆ ಪರಿಣಾಮ ಬೀರುವ ಹೊಸ ನಿಯಮ ತಂದಿದೆ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್‌ಗಳನ್ನು ನೋಡಲು ಬಯಸಿದರೆ ಖಾತೆಗೆ ಸೈನ್ ಇನ್ ಮಾಡುವುದನ್ನು ಕಡ್ಡಾಯಗೊಳಿಸುತ್ತಿದೆ.
ಮೊದಲು, ಬಳಕೆದಾರರು ಖಾತೆಗೆ ಲಾಗ್ ಇನ್ ಆಗದಿದ್ದರೂ ಟ್ವೀಟ್‌ಗಳನ್ನು ನೋಡುವ, ಓದುವ ಅವಕಾಶವನ್ನು ನೀಡಲಾಗಿತ್ತು. ಇನ್ನು ಮುಂದೆ ಯಾವುದೇ ಟ್ವೀಟ್ ಗಳನ್ನು ಓದುವುದಿದ್ದರೂ ಸೈನ್ ಇನ್ ಮಾಡುವುದು ಕಡ್ಡಾಯವಾಗುತ್ತದೆ. ಈ ನಿಯವನ್ನು ಎಲಾನ್ ಮಸ್ಕ್ ತಾತ್ಕಾಲಿಕ ತುರ್ತು ಕ್ರಮ ಎಂದು ಬಣ್ಣಿಸಿದ್ದಾರೆ.
ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವ ಟ್ವಿಟರ್ ಡೇಟಾವನ್ನು ಅಳಿಸಲಾಗುತ್ತಿದೆ ಎಂದು ಮಸ್ಕ್ ಹೇಳಿದ್ದಾರೆ. "ಹಲವಾರು ಸಂಸ್ಥೆಗಳು ಟ್ವಿಟರ್ ಡೇಟಾವನ್ನು ಅತ್ಯಂತ ಆಕ್ರಮಣಕಾರಿಯಾಗಿ ಸ್ಕ್ರ್ಯಾಪ್ ಮಾಡುತ್ತಿವೆ, ಅದು ನೈಜ ಬಳಕೆದಾರರ ಅನುಭವದ ಮೇಲೆ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ" ಎಂದು ಮಸ್ಕ್ ಟ್ವೀಟ್ ನಲ್ಲಿ ಹೇಳಿದ್ದಾರೆ.