ಹೊಸ ಯೂಟ್ಯೂಬ್ ಚಾನಲ್: ಬಿಲಿಯನ್ ಮೈಲುಗಲ್ಲು ಸಾಧನೆಯತ್ತ ರೊನಾಲ್ಡೊ

Update: 2024-08-27 03:11 GMT

PC: x.com/Cristiano

ಸರ್ವಕಾಲಿಕ ಅತ್ಯುತ್ತಮ ಫುಟ್ಬಾಲ್ ಪಟುಗಳ ಪೈಕಿ ಒಬ್ಬರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ, ಹೊಸ ಯೂಟ್ಯೂಬ್ ಚಾನಲ್ "ಯುಆರ್ ಕ್ರಿಸ್ಟಿಯಾನೊ" ಆರಂಭಿಸಿದ ಬಳಿಕ ಸಾಮಾಜಿಕ ಜಾಲತಾಣ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅನುಯಾಯಿಗಳ ಸಂಖ್ಯೆಯಲ್ಲಿ ಮಿಲಿಯ, 10 ಮಿಲಿಯ ಹಾಗೂ 20 ಮಿಲಿಯದ ಮೈಲುಗಲ್ಲುಗಳನ್ನು ವೇಗವಾಗಿ ತಲುಪಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ದಾಖಲೆಗಳು ಮತ್ತೆ ಬುಡಮೇಲಾಗುತ್ತಿದ್ದು, ಪೋರ್ಚ್ಗೀಸ್ ಫುಟ್ಬಾಲ್ ತಾರೆ ಈ ವಿಡಿಯೊ ಪ್ಲೇಟ್ಫಾರಂನಲ್ಲಿ 50 ದಶಲಕ್ಷದ ಗಡಿ ಸಮೀಪಿಸಿದ್ದಾರೆ. ಆದಾಗ್ಯೂ ಅವರ ಅನುಯಾಯಿಗಳ ಸಂಖ್ಯೆ ಒಂದು ಬಿಲಿಯದ ಗಡಿ ದಾಟಲಿದೆ ಎನ್ನುವುದು ಯೂಟ್ಯೂಬ್ನ ನಿರೀಕ್ಷೆಯಾಗಿದೆ. ಈ ಮೂಲಕ ಇಷ್ಟೊಂದು ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಮೊಟ್ಟಮೊದಲ ವ್ಯಕ್ತಿಯಾಗುತ್ತಾರೆ ಎನ್ನುವ ನಿರೀಕ್ಷೆ ಈ ಸಾಮಾಜಿಕ ಜಾಲತಾಣದ್ದು.

ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳ ಪ್ರಮುಖ ಆಟಗಾರರಾಗಿದ್ದ ರೊನಾಲ್ಡೊ, ಟ್ವಿಟ್ಟರ್ (112.7 ಮಿಲಿಯನ್), ಫೇಸ್ಬುಕ್ (170 ಮಿಲಿಯ) ಮತ್ತು ಇನ್ಸ್ಟಾಗ್ರಾಂ (637 ಮಿಲಿಯ) ಹೀಗೆ ಹಲವು ಜಾಲತಾಣ ವೇದಿಕೆಗಳಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಜಾಲತಾಣಗಳಲ್ಲಿ ಅವರ ಒಟ್ಟು ಅನುಯಾಯಿಗಳ ಸಂಖ್ಯೆ 100 ಕೋಟಿಯನ್ನು ತಲುಪುವ ನಿರೀಕ್ಷೆ ಇದೆ. ಈಗಾಗಲೇ ಯೂಟ್ಯೂಬ್ ನಲ್ಲಿ 45 ದಶಲಕ್ಷ ಅನುಯಾಯಿಗಳನ್ನು ಹೊಂದಿರುವ ಅವರ ಅನುಯಾಯಿಗಳ ಸಂಖ್ಯೆ 964 ದಶಲಕ್ಷ ಆಗಿದೆ.

ಪ್ರಸ್ತುತ ವಿಶ್ವದಲ್ಲಿ ಯಾವುದೇ ವ್ಯಕ್ತಿ 100 ಕೋಟಿ ಅನುಯಾಯಿಗಳನ್ನು ಜಾಲತಾಣಗಳಲ್ಲಿ ಹೊಂದಿರುವ ನಿದರ್ಶನ ಇಲ್ಲ. ರೊನಾಲ್ಡೊ ಅವರ ಯೂಟ್ಯೂಬ್ ಚಾನಲ್ ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ, ಈ ಗಡಿಯನ್ನು ತಲುಪಲು ಎಷ್ಟು ದಿನಗಳು ಬೇಕಾಗುತ್ತದೆ ಎನ್ನುವುದಷ್ಟೇ ಕುತೂಹಲದ ವಿಚಾರ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News