ಯಾವುದೇ ದೇಶ ನಿರ್ದೇಶನ ನೀಡಲು ಸಾಧ್ಯವಿಲ್ಲ: ಅಮೆರಿಕದ ಆಗ್ರಹಕ್ಕೆ ಪಾಕಿಸ್ತಾನ ಪ್ರತ್ಯುತ್ತರ
ಇಸ್ಲಾಮಾಬಾದ್: ಫೆಬ್ರವರಿ 8ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿನ ಅಸಂಗತತೆಗಳ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕದ ಸಲಹೆಯನ್ನು ಪಾಕಿಸ್ತಾನ ತಳ್ಳಿಹಾಕಿದ್ದು ಬಾಹ್ಯ ಆದೇಶಗಳಿಗೆ ಮಣಿಯುವುದಿಲ್ಲ ಎಂದು ಹೇಳಿದೆ.
ಸ್ವತಂತ್ರ, ಸಾರ್ವಭೌಮ ದೇಶವಾಗಿರುವ ಪಾಕಿಸ್ತಾನಕ್ಕೆ ಯಾವ ದೇಶವೂ ಆದೇಶ ನೀಡಲು ಸಾಧ್ಯವಿಲ್ಲ. ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಾರ್ವಭೌಮ ಹಕ್ಕುಗಳ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಝ್ ಝಹ್ರಾ ಬಲೋಚ್ ಹೇಳಿದ್ದಾರೆ.
`ಸಾರ್ವತ್ರಿಕ ಚುನಾವಣೆಗಳಲ್ಲಿ ಅಕ್ರಮ ಅಥವಾ ಹಸ್ತಕ್ಷೇಪದ ಕುರಿತ ಆರೋಪದ ಬಗ್ಗೆ ಪಾಕಿಸ್ತಾನದ ಕಾನೂನು ಮತ್ತು ಕಾರ್ಯವಿಧಾನಕ್ಕೆ ಅನುಗುಣವಾಗಿ ಸಂಪೂರ್ಣ ಮತ್ತು ಪಾರದರ್ಶಕ ತನಿಖೆ ನಡೆಯಬೇಕು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ವರದಿ ಕಳವಳಕಾರಿಯಾಗಿದ್ದು ಈ ಬಗ್ಗೆ ತನಿಖೆ ಕ್ಷಿಪ್ರವಾಗಿ ನಡೆದು ಕ್ರಮ ಕೈಗೊಳ್ಳಬೇಕು' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಚುನಾವಣೆಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಆರೋಪಿಸಿದ್ದು ತಮ್ಮ ಪಕ್ಷದ ಹಲವು ಅಭ್ಯರ್ಥಿಗಳು ಗೆದ್ದಿದ್ದರೂ ಎದುರಾಳಿ ಅಭ್ಯರ್ಥಿಗಳ ಪರ ಫಲಿತಾಂಶ ಪ್ರಕಟಿಸಲಾಗಿರುವುದರಿಂದ ಚುನಾವಣೆಯ ಮೌಲ್ಯಮಾಪನ ಮತ್ತು ಪರಿಶೀಲನೆ ನಡೆಸದೆ ಪಾಕಿಸ್ತಾನಕ್ಕೆ ಮುಂದಿನ ಕಂತಿನ ಸಾಲವನ್ನು ಬಿಡುಗಡೆಗೊಳಿಸಬಾರದು ಎಂದು ಐಎಂಎಫ್ ಅನ್ನು ಆಗ್ರಹಿಸಿದೆ.
ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ವ್ಯಾಪಕ ಅನ್ಯಾಯ, ಅಕ್ರಮ ನಡೆದಿರುವುದು ಸ್ಪಷ್ಟವಾಗಿರುವುದರಿಂದ ಈ ಬಗ್ಗೆ ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆ ನಡೆಯುವ ತನಕ ಪಾಕಿಸ್ತಾನದ ಹೊಸ ಸರಕಾರವನ್ನು ಮಾನ್ಯ ಮಾಡಬಾರದು ಎಂದು ಅಮೆರಿಕದ ಸುಮಾರು 35 ಸಂಸದರು ಅಧ್ಯಕ್ಷ ಜೋ ಬೈಡನ್‍ಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಮ್ತಾಝ್ ಝಹ್ರಾ ಬಲೋಚ್ ` ಇದು ಅಮೆರಿಕದ ಜನಪ್ರತಿನಿಧಿಗಳ ನಡುವಿನ ಪತ್ರ ವ್ಯವಹಾರವಾಗಿದ್ದು ಪಾಕಿಸ್ತಾನದ ಸರಕಾರವನ್ನು ಉದ್ದೇಶಿಸಿಲ್ಲ. ಆದ್ದರಿಂದ ಇಂತಹ ಪತ್ರಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಪಾಕಿಸ್ತಾನವು ಸಕ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಳಗೊಂಡಿದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆ ಹಾಗೂ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ನೀಡಲು ಅಗತ್ಯವಿರುವ ಸ್ಥಳೀಯ ವ್ಯವಸ್ಥೆಯನ್ನು ಹೊಂದಿದೆ' ಎಂದಿದ್ದಾರೆ.