ಬೇಹುಗಾರಿಕೆ ಉಪಗ್ರಹ ಉಡಾವಣೆ ಮಾಡಿದ ಉತ್ತರ ಕೊರಿಯಾ

Update: 2023-11-22 16:12 GMT

Photo- PTI

ಪ್ಯೋಂಗ್ಯಾಂಗ್: ಎರಡು ಬಾರಿಯ ವೈಫಲ್ಯವನ್ನು ಮೆಟ್ಟಿನಿಂತ ಉತ್ತರ ಕೊರಿಯಾ ಮೂರನೇ ಪ್ರಯತ್ನದಲ್ಲಿ ಮಿಲಿಟರಿ ಬೇಹುಗಾರಿಕೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಸಫಲವಾಗಿದೆ ಎಂದು ಸರಕಾರಿ ಸ್ವಾಮ್ಯದ ಕೆಸಿಎನ್ಎ ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ.

ಉತ್ತರ ಪ್ಯೋಂಗ್ಯಾನ್ ಪ್ರಾಂತದಿಂದ ಮಂಗಳವಾರ ರಾತ್ರಿ ಉಪಗ್ರಹವನ್ನು ಹೊತ್ತ ರಾಕೆಟ್ ಅಂತರಿಕ್ಷಕ್ಕೆ ನೆಗೆದಿದೆ ಮತ್ತು ವಿಚಕ್ಷಣ ಉಪಗ್ರಹ `ಮಲಿಗ್ಯಾಂಗ್-1' ಅನ್ನು ಅದರ ಕಕ್ಷೆಯಲ್ಲಿ ನಿಖರವಾಗಿ ಇರಿಸಿದೆ ಎಂದು ವರದಿ ಹೇಳಿದೆ. ಬೇಹುಗಾರಿಕೆ ಉಪಗ್ರಹ ಉಡಾವಣೆ ವಿಶ್ವಸಂಸ್ಥೆ ನಿರ್ಬಂಧಗಳ ನಿರ್ಲಜ್ಜ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಖಂಡಿಸಿದೆ. ಈ ವರ್ಷದ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಬೇಹುಗಾರಿಕೆ ಉಪಗ್ರಹ ಉಡಾವಣೆ ವಿಫಲವಾದ ಬಳಿಕ ಮತ್ತೊಂದು ಪ್ರಯತ್ನ ನಡೆಸದಂತೆ ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ಎಚ್ಚರಿಕೆ ನೀಡಿದ್ದವು.

ಬ್ಯಾಲಿಸ್ಟಿಕ್ ತಂತ್ರಜ್ಞಾನ ಒಳಗೊಂಡಿರುವ ಯಾವುದೇ ಪರೀಕ್ಷೆ ನಡೆಸದಂತೆ ವಿಶ್ವಸಂಸ್ಥೆ ಉತ್ತರ ಕೊರಿಯಾವನ್ನು ನಿರ್ಬಂಧಿಸಿದೆ. ಆದರೆ ಅಮೆರಿಕ ಮತ್ತು ದಕ್ಷಿಣ ಕೊರಿಯಾದಿಂದ ನಿರಂತರ ಬೆದರಿಕೆ ಇರುವುದರಿಂದ ಉಪಗ್ರಹ ಉಡಾವಣೆ ತನ್ನ ಕಾನೂನುಬದ್ಧ ಹಕ್ಕಾಗಿದೆ ಎಂದು ಉತ್ತರ ಕೊರಿಯಾ ಪ್ರತಿಪಾದಿಸುತ್ತಿದೆ. ಉತ್ತರ ಕೊರಿಯಾಕ್ಕೆ ಬ್ಯಾಲಿಸ್ಟಿಕ್ ತಂತ್ರಜ್ಞಾನದ ನೆರವನ್ನು ರಶ್ಯ ಒದಗಿಸಿದ್ದು ಇದಕ್ಕೆ ಪ್ರತಿಯಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಬಳಸಲು ರಶ್ಯಕ್ಕೆ 10 ನೌಕೆಗಳಷ್ಟು ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ರವಾನಿಸಿದೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕೆ ಏಜೆನ್ಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News