ನ್ಯೂಯಾರ್ಕ್‌ನಲ್ಲಿ ಹಿಂದೂ, ಸಿಖ್‌, ಮುಸ್ಲಿಂ ಸಂಘಟನೆಗಳಿಂದ ಪ್ರಧಾನಿ ಮೋದಿ ವಿರುದ್ಧ ವಿಶಿಷ್ಟ ಪ್ರತಿಭಟನೆ

Update: 2023-12-21 08:57 GMT

Photo credit: hindusforhumanrights.org

ನ್ಯೂಯಾರ್ಕ್‌: “ನಾನು ಫಿಫ್ತ್‌ ಅವೆನ್ಯೂವಿನಲ್ಲಿ ಯಾರನ್ನಾದರೂ ಗುಂಡಿಕ್ಕಬಲ್ಲೆ ಮತ್ತು ಅದರಿಂದ ತಪ್ಪಿಸಿಕೊಳ್ಳಬಲ್ಲೆ, ತಿಳಿಯಿತೇ?” (I could shoot someone on Fifth Avenue and get away with it, OK?)ಎಂಬ ಬ್ಯಾನರ್‌ ಹಿಡಿದುಕೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಹೊತ್ತು ವಾಹನದಲ್ಲಿ ಸಾಗುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಿಶಿಷ್ಟ ಪ್ರತಿಭಟನೆ ನ್ಯೂಯಾರ್ಕ್‌ನಲ್ಲಿ ಹಿಂದೂ, ಸಿಖ್‌, ಮುಸ್ಲಿಂ ಸಂಘಟನೆಗಳಿಂದ ನಡೆಯಿತು.

2016ರಲ್ಲಿ ಐಯೋವಾ ಎಂಬಲ್ಲಿನ ತಮ್ಮ ಪ್ರಚಾರದ ವೇಳೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೂಡ ಇಂತಹುದೇ ಮಾತುಗಳನ್ನಾಡಿದ್ದರು. “ನಾನು ಫಿಫ್ತ್‌ ಅವೆನ್ಯೂವಿನ ಮಧ್ಯದಲ್ಲಿ ನಿಂತು ಯಾರನ್ನಾದರೂ ಗುಂಡಿಕ್ಕಬಲ್ಲೆ, ಆದರೂ ನಾನು ಯಾವುದೇ ಮತದಾರರನ್ನು ಕಳೆದುಕೊಳ್ಳುವುದಿಲ್ಲ ತಿಳಿಯಿತೇ?”(I could stand in the middle of Fifth Avenue and shoot somebody, and I wouldn’t lose any voters, OK?”) ಎಂದು ಟ್ರಂಪ್ ಹೇಳಿದ್ದರು. ಆದ್ದರಿಂದ ಟ್ರಂಪ್‌ ಟವರ್‌ ಪಕ್ಕದಲ್ಲೇ ಮೋದಿ ಪ್ರತಿಕೃತಿ ಹಿಡಿದು ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಈ ಬ್ಯಾನರ್‌ ಹಿಡಿದ ಮೋದಿ ಪ್ರತಿಕೃತಿಯನ್ನು‌ ಹೊತ್ತ ವಾಹನವನ್ನೊಳಗೊಂಡ ಪ್ರತಿಭಟನೆಯನ್ನು ಅಮೆರಿಕಾದ ಹಿಂದೂ, ಮುಸ್ಲಿಂ ಮತ್ತು ಸಿಖ್‌ ಸಂಘಟನೆಗಳು ಆಯೋಜಿಸಿದ್ದವು. ಭಾರತೀಯ ನಾಗರಿಕ ಹಾಗೂ ಭಾರತ ಸರಕಾರದ ಅಧಿಕಾರಿಯೊಬ್ಬರನ್ನು ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ನನ್ನು ಅಮೆರಿಕಾದಲ್ಲಿ ಹತ್ಯೆಗೈಯ್ಯಲು ಸಂಚು ಹೂಡಿದ ಪ್ರಕರಣದಲ್ಲಿ ಅಮೆರಿಕಾ ಆರೋಪಿಗಳನ್ನಾಗಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

“ಭಾರತೀಯ ಮೂಲದ ಅಮೆರಿಕನ್‌ ನಾಗರಿಕರ ಹತ್ಯೆಗೈಯ್ಯಲು ಮತ್ತು ಬೆದರಿಸಲು ಭಾರತ ಸರ್ಕಾರ ನಡೆಸುತ್ತಿದೆಯೆನ್ನಲಾದ ಸಂಚಿನ ಕುರಿತಾದ ಕಳವಳಕಾರಿ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಗುಂಪುಗಳು ಒಂದಾಗಿವೆ. ವಿದೇಶಿ ನೆಲದಲ್ಲಿ ಇಂತಹ ಕೃತ್ಯಗೈಯ್ಯುವ ಧೈರ್ಯ ಮತ್ತು ಅದು ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ಮಾನವ ಹಕ್ಕುಗಳ ಮೇಲೆ ಬೀರಬಹುದಾದ ಪರಿಣಾಮಗಳು ಆತಂಕಕ್ಕೆ ಕಾರಣವಾಗಿದೆ,” ಎಂದು ಹಿಂದೂಸ್‌ ಫಾರ್‌ ಹ್ಯೂಮನ್‌ ರೈಟ್ಸ್‌ ಹೇಳಿದೆ.

ಈ ಕುರಿತು ಮಾತನಾಡಿದ ಹಿಂದೂಸ್‌ ಫಾರ್‌ ಹ್ಯೂಮನ್‌ ರೈಟ್ಸ್‌ನ ಸುನೀತಾ ವಿಶ್ವನಾಥ್‌ “ನಾವು ಗಂಭೀರವಾದ ವಿಚಾರ ಎತ್ತುತ್ತಿದ್ದೇವೆ. ನಮ್ಮ ಜೀವಗಳು ಮುಖ್ಯ ಮತ್ತು ಅವುಗಳನ್ನು ರಕ್ಷಿಸಬೇಕು ಎಂಬ ವಾಸ್ತವವನ್ನು ಅಧ್ಯಕ್ಷ ಜೋ ಬೈಡನ್‌ ಒಪ್ಪಿಕೊಳ್ಳಬೇಕು ಮತ್ತು ಈ ವಿಚಾರವನ್ನು ಮೋದಿ ಅವರೊಂದಿಗೂ ಹೇಳಬೇಕು,” ಎಂದು ಹೇಳಿದ್ದಾರೆ.

ಇಂಡಿಯನ್‌ ಅಮೆರಿಕನ್‌ ಮುಸ್ಲಿಂ ಕೌನ್ಸಿಲ್‌ನ ಸಫಾ ಅಹ್ಮದ್‌ ಅವರು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಮಾತನಾಡಿ “ಮುಂದೆ ಯಾರು ಮತ್ತು ನಮ್ಮ ಸರ್ಕಾರ ಮಧ್ಯಪ್ರವೇಶಿಸಲು ಏನು ನಡೆಯಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ. ಅಮೆರಿಕಾ ತನ್ನ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಲು ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ತತ್ವಗಳನ್ನು ಎತ್ತಿ ಹಿಡಿಯಲು ಬದ್ಧವಾಗಬೇಕು,” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News