ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ: ಅಗ್ರಸ್ಥಾನ ಉಳಿಸಿಕೊಂಡ ಮಸ್ಕ್, ಝುಕರ್‍ಬರ್ಗ್ ತೃತೀಯ

ಲಂಡನ್, ಮಾ.28: ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ(2025)ಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿ ಅಗ್ರಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಮರು ಚುನಾಯಿತರಾದ ಬಳಿಕ ಟೆಸ್ಲಾದ ಶೇರುಗಳ ಬೆಲೆಯಲ್ಲಿನ ಏರಿಕೆಯಿಂದಾಗಿ ಮಸ್ಕ್ ಅವರ ಸಂಪತ್ತು 420 ಶತಕೋಟಿ ಡಾಲರ್‍ಗೆ ತಲುಪಿದೆ.
ಅಮಝಾನ್‍ನ ಸ್ಥಾಪಕ ಜೆಫ್ ಬೆಝೋಸ್ 266 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಮೆಟಾದ ಸಿಇಒ ಮಾರ್ಕ್ ಝಕರ್‍ಬರ್ಗ್ ಒಟ್ಟು 242 ಶತಕೋಟಿ ಡಾಲರ್ ನಿವ್ವಳ ಸಂಪತ್ತಿನ ಮೂಲಕ ಇದೇ ಮೊದಲ ಬಾರಿಗೆ ವಿಶ್ವದ ಅಗ್ರ ಮೂವರು ಕೋಟ್ಯಾಧೀಶರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಎಐ(ಕೃತಕ ಬುದ್ಧಿಮತ್ತೆ) ಕ್ಷೇತ್ರದಲ್ಲಿ ಮೆಟಾದ ಹೂಡಿಕೆಯು ಝಕರ್‍ಬರ್ಗ್ ಅವರ ಸಂಪತ್ತಿನಲ್ಲಿ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ.
ಒರಾಕ್ಲ್‍ನ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್(203 ಶತಕೋಟಿ ಡಾಲರ್), ವ್ಯಾರೆನ್ ಬಫೆಟ್(167 ಶತಕೋಟಿ ಡಾಲರ್), ಲ್ಯಾರಿ ಪೇಜ್ (164 ಶತಕೋಟಿ ಡಾಲರ್), ಬರ್ನಾರ್ಡ್ ಅರ್ನಾಲ್ಟ್ (157 ಶತಕೋಟಿ ಡಾಲರ್), ಸ್ಟೀವ್ ಬಾಮರ್(156 ಶತಕೋಟಿ ಡಾಲರ್), ಸೆರ್ಗೆಯ್ ಬ್ರಿನ್(148 ಶತಕೋಟಿ ಡಾಲರ್), ಬಿಲ್ ಗೇಟ್ಸ್ (143 ಶತಕೋಟಿ ಡಾಲರ್) ಕ್ರಮವಾಗಿ 4ರಿಂದ 10 ಸ್ಥಾನ ಪಡೆದಿದ್ದಾರೆ.
ಏಶ್ಯದ ಅತೀ ಶ್ರೀಮಂತ ಎನಿಸಿಕೊಂಡಿರುವ ಭಾರತದ ಮುಕೇಶ್ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 17ನೇ ಸ್ಥಾನ, ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ 18ನೇ ಸ್ಥಾನದಲ್ಲಿದ್ದಾರೆ.