ಅಮೆರಿಕದ ಜೊತೆಗಿನ ಸಾಂಪ್ರದಾಯಿಕ ಸಂಬಂಧ ಕೊನೆಗೊಂಡಿದೆ: ಕೆನಡಾ ಪ್ರಧಾನಿ ಕಾರ್ನೆ

ಕೆನಡಾ ಪ್ರಧಾನಿ ಕಾರ್ನೆ | PC : ANI
ಒಟ್ಟಾವ: ಆರ್ಥಿಕ ಏಕೀಕರಣ ಮತ್ತು ಮಿಲಿಟರಿ ಸಹಕಾರದ ಆಧಾರದ ಮೇಲೆ ಅಮೆರಿಕದೊಂದಿಗಿನ ಸಾಂಪ್ರದಾಯಿಕ ಸಂಬಂಧದ ಯುಗವು ಕೊನೆಗೊಂಡಿದೆ ಎಂದು ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನೆ ಹೇಳಿದ್ದಾರೆ.
ನಮ್ಮ ಆರ್ಥಿಕತೆಯ ಆಳವಾದ ಏಕೀಕರಣ ಮತ್ತು ಬಿಗಿಯಾದ ಭದ್ರತೆ ಮತ್ತು ಮಿಲಿಟರಿ ಸಹಕಾರದ ಆಧಾರದ ಮೇಲೆ ನಾವು ಅಮೆರಿಕದೊಂದಿಗೆ ಹೊಂದಿದ್ದ ಸಂಬಂಧ ಮುಗಿದಿದೆ. ಅಮೆರಿಕ ಮುಂದೆ ಏನು ಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸ್ಪಷ್ಟವಾದ ಸಂಗತಿಯೆಂದರೆ ಕೆನಡಿಯನ್ನರಾದ ನಾವು ಏಜೆನ್ಸಿಯನ್ನು ಹೊಂದಿದ್ದೇವೆ. ನಮಗೆ ಅಧಿಕಾರವಿದೆ. ನಾವು ನಮ್ಮ ಸ್ವಂತ ಮನೆಯ ಮಾಲೀಕರು' ಎಂದು ಕೆನಡಾ-ಅಮೆರಿಕ ಸಂಬಂಧಗಳ ಕುರಿತ ಕ್ಯಾಬಿನೆಟ್ ಸಮಿತಿಯ ತುರ್ತು ಸಭೆಯ ಬಳಿಕ ಕಾರ್ನೆ ಹೇಳಿದ್ದಾರೆ.
ಮಾರ್ಚ್ 14ರಂದು ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಕಾರ್ನೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಅಮೆರಿಕ ಅಧ್ಯಕ್ಷರ ಜತೆ ಮಾತುಕತೆ ನಡೆಸಲಿದ್ದೇನೆ. ಆದರೆ ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆ ಆಗಿಲ್ಲ. ಅಮೆರಿಕ ವಿಶ್ವಾಸಾರ್ಹ ಪಾಲುದಾರನಲ್ಲ ಎಂಬುದು ಸ್ಪಷ್ಟವಾಗಿದೆ. ಸಮಗ್ರ ಮಾತುಕತೆಯ ಮೂಲಕ ತುಸು ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯವಾಗಬಹುದು. ಆದರೆ ಹಳೆಯ ಸಂಬಂಧಗಳ ಯುಗಕ್ಕೆ ಮತ್ತೆ ಮರಳಲು ಸಾಧ್ಯವಾಗದು' ಎಂದು ಕಾರ್ನೆ ಹೇಳಿದ್ದಾರೆ.