ಪ್ರಬಲ ಭೂಕಂಪ : ಮ್ಯಾನ್ಮಾರ್, ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Photo | X
ನೇಪ್ಯಿಟಾ: ಮ್ಯಾನ್ಮಾರ್ ಮತ್ತು ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿರುವ ಬೆನ್ನಲ್ಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಥಾಯ್ಲೆಂಡ್‌ನಲ್ಲಿರುವ ಭಾರತೀಯರಿಗೆ ಸಹಾಯವಾಣಿಯನ್ನು ತೆರೆದಿದೆ.
ಭೂಕಂಪದ ವೇಳೆ ಕಟ್ಟಡಗಳ ಕುಸಿತದ ವೀಡಿಯೊಗಳು ವೈರಲ್ ಆಗಿವೆ. ಅಪಾರ ಸಾವು-ನೋವುಗಳು ಸಂಭವಿಸಿರುವ ಸಾಧ್ಯತೆ ಇದೆ. ಎನ್‌ಡಿಟಿವಿ ವರದಿಯ ಪ್ರಕಾರ, ಈವರೆಗೆ 20 ಮಂದಿ ಮೃತಪಟ್ಟಿದ್ದಾರೆ.
ಭೂಕಂಪದ ಬೆನ್ನಲ್ಲೇ ಮ್ಯಾನ್ಮಾರ್ ಅಂತಾರಾಷ್ಟ್ರೀಯ ನೆರವಿಗೆ ಮನವಿ ಮಾಡಿಕೊಂಡಿದೆ. ಬ್ಯಾಂಕಾಕ್‌ನಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಥಾಯ್ಲೆಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ತುರ್ತು ಸಭೆ ನಡೆಸಿ ರಾಜಧಾನಿಯನ್ನು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಪ್ರಬಲ ಕಂಪನಕ್ಕೆ ಎತ್ತರದ ಕಟ್ಟಡಗಳು ನೆಲಸಮಗೊಂಡಿದೆ ಎಂದು ವರದಿಯಾಗಿದೆ. ಮೇಘಾಲಯ, ಕೋಲ್ಕತ್ತಾ, ಇಂಫಾಲ್‌ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಸರಿಸುಮಾರು 30 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಭೂಕಂಪನದ ಕೇಂದ್ರ ಬಿಂದು ಸಾಗೈಂಗ್ ನಗರದ ವಾಯುವ್ಯಕ್ಕೆ 16 ಕಿಮೀ ದೂರದಲ್ಲಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜಿಎಫ್‌ಝಡ್ ಭೂವಿಜ್ಞಾನ ಕೇಂದ್ರ ತಿಳಿಸಿತು. ಇದು ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಿಂದ ಸುಮಾರು 250 ಕಿಮೀ ದೂರದಲ್ಲಿದೆ.
ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಥಾಯ್ಲೆಂಡ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ತುರ್ತು ಸಹಾಯವಾಣಿ ಸಂಪರ್ಕ ಸಂಖ್ಯೆಯನ್ನು ನೀಡಿದೆ. ಅವಶ್ಯಕತೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ +66 618819218 ಸಂಪರ್ಕಿಸುವಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಿದೆ.