ಇರಾನ್ ಮೇಲೆ ಪಾಕ್ ಕ್ಷಿಪಣಿ ದಾಳಿ; ಕನಿಷ್ಠ 9 ಮಂದಿ ಬಲಿ
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ಮೇಲೆ ಬುಧವಾರ ನಸುಕಿನಲ್ಲಿ ಇರಾನ್ ವಾಯುದಾಳಿ ನಡೆಸಿದ ಮರುದಿನವೇ ಪಾಕ್ ಸೇನೆಯು ಇರಾನ್ನ ಆಗ್ನೇಯ ಗಡಿ ಪ್ರಾಂತದಲ್ಲಿ ಗುರುವಾರ ಕ್ಷಿಪಣಿ ದಾಳಿ ನಡೆಸಿದ್ದು, ನಾಲ್ವರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನವು ಗುರುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 6:00 ಗಂಟೆಯ ವೇಳೆಗೆ ಇರಾನಿನ ಸಿಸ್ತಾ ಬಲೂಚಿಸ್ತಾನ ಪ್ರಾಂತದ ಸಾರಾವಾನ್ ನಗರದ ಸಮೀಪರದ ಗ್ರಾಮವೊಂದರ ಮೇಲೆ ವಾಯುಪಡೆಯ ಜೆಟ್ ಗಳನ್ನು ಬಳಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆಂದು ಸಿಸ್ತಾ-ಬಲೂಚಿಸ್ತಾನ ಪ್ರಾಂತದ ಗವರ್ನರ್ ಅಲಿರೆಝಾ ಮರ್ಹಾಮತಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇರಾನಿನ ಸರಕಾರಿ ಸ್ವಾಮ್ಯದ ಸುದ್ದಿವಾಹಿನಿ ಇರ್ನಾ ವರದಿ ಮಾಡಿದೆ.
ಇರಾನಿ ನೆಲದ ಮೇಲೆ ದಾಳಿ ನಡೆಸಿರುವುದನ್ನು ಪಾಕ್ ಒಪ್ಪಿಕೊಂಡಿದೆ. ಇಂದು ಬೆಳಗ್ಗೆ ಇರಾನ್ ಸಿಸ್ತಾನೊ ಬಲೂಚಿಸ್ತಾನ ಪ್ರಾಂತದಲ್ಲಿರುವ ಭಯೋತ್ಪಾದಕ ಅಡಗುದಾಣಗಳ ಮೇಲೆ ಅತ್ಯಂತ ಸಮನ್ವಯದ ಹಾಗೂ ನಿರ್ದಿಷ್ಟವಾದ ಗುರಿಗಳ ಮೇಲೆ ನಿಖರವಾದ ಪಾಕಿಸ್ತಾನವು ಮಿಲಿಟರಿ ದಾಳಿಗಳನ್ನು ನಡೆಸಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ‘ಮಾರ್ಗ್ ಬರ್ ಸಮಾಚಾರ್’ ಎಂಬ ಸಂಕೇತನಾಮದ ಬೇಹುಗಾರಿಕೆ ಆಧಾರಿತ ಕಾರ್ಯಾಚರಣೆಯಲ್ಲಿ ಹಲವಾರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ ಇರಾನಿನ ಸಾರಾವಾನ್ ನಗರದ ಬಳಿ ಗುರುವಾರ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ವರದಿಯಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ತಿಳಿದುಬಂದಿದೆ.
ಪಾಕಿಸ್ತಾನದ ಆಡಳಿತರಹಿತವಾದ ಬಲೂಚಿಸ್ತಾನ ಪ್ರಾಂತದಲ್ಲಿರುವ ಉಗ್ರಗಾಮಿ ಸಂಘಟನೆ ಜೈಶ್ ಅಲ್ ಅದಿಲ್ ನ ಎರಡು ನೆಲೆಗಳ ಮೇಲೆ ಇರಾನ್ ಮಂಗಳವಾರ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಈ ಘಟನೆಯ ಬೆನ್ನಲ್ಲೇ ಪಾಕಿಸ್ತಾನವು ತನ್ನ ರಾಯಭಾರಿಯನ್ನು ಇರಾನ್ ನಿಂದ ಹಿಂದಕ್ಕೆ ಕರೆಸಿಕೊಂಡಿತ್ತು. ಪಾಕ್ ನ ನೆಲದಲ್ಲಿರುವ ಭಯೋತ್ಪಾದಕರನ್ನು ಮಾತ್ರವೇ ಗುರಿಯಿರಿಸಿ ದಾಳಿಗಳನ್ನು ನಡೆಸಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರ್ ಅಬ್ದೊಲ್ಲಾಹಿಯಾನಂ ಡಾವೊಸ್ನಲ್ಲಿ ತಿಳಿಸಿದ್ದರು.
ಈ ಮಧ್ಯೆ ಪಾಕ್ ಗಾಗಿನ ಇರಾನ್ ರಾಯಭಾರಿಯವರು ಸ್ವದೇಶಕ್ಕೆ ತೆರಳಿರುವುದರಿಂದ ಸದ್ಯಕ್ಕೆ ಹಿಂತಿರುಗುವುದಿಲ್ಲವೆಂದು ಪಾಕ್ ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಝ್ ಬಲೂಚಟ್ ತಿಳಿಸಿದ್ದಾರೆ.
ದಾಳಿಯನ್ನು ಸಮರ್ಥಿಸಿದ ಪಾಕ್
ಇರಾನಿನ ಗಡಿಪ್ರದೇಶದ ಮೇಲೆ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಬಲವಾಗಿ ಸಮರ್ಥಿಸಿಕೊಂಡಿದೆ. ‘‘ ತಮ್ಮನ್ನು ‘ಸಾರ್ಮಾಚಾರ್’ಗಳೆಂದು ಕರೆದುಕೊಳ್ಳುವ ಪಾಕ್ ಮೂಲದ ಭಯೋತ್ಪಾದಕರಿಗೆ ಇರಾನ್ ನಲ್ಲಿರುವ ಆಡಳಿತಸಹಿತ ಪ್ರಾಂತಗಳು ಸುರಕ್ಷಿತ ಸ್ವರ್ಗಗಳು ಹಾಗೂ ಅಡಗುದಾಣಗಳಾಗಿವೆ. ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಇರಾನ್ ಜೊತೆ ನಡೆಸುತ್ತಿರುವ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನವು ತನ್ನ ಗಂಭೀರ ಕಳವಳಗಳನ್ನು ಹಂಚಿಕೊಂಡಿತ್ತು’’ ಎಂದು ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.
‘‘ಆದಾಗ್ಯೂ, ನಾವು ವ್ಯಕ್ತಪಡಿಸಿರುವ ಗಂಭೀರ ಕಳವಳಗಳಿಗೆ ಸೂಕ್ತ ಪ್ರತಿಕ್ರಿಯೆಯ ಕೊರತೆಯಿದ್ದ ಕಾರಣ, ಈ ತಥಾಕಥಿತ ಸರ್ಮಾಚಾರ್ಗಳು ನಿರ್ದಯವಾಗಿ ಅಮಾಯಕ ಪಾಕಿಸ್ತಾನಿಯರ ರಕ್ತಗಳನ್ನು ಚೆಲ್ಲುತ್ತಿದ್ದಾರೆ’’ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
‘‘ಅತ್ಯಂತ ಸಂಕೀರ್ಣವಾದ ಈ ಕಾರ್ಯಾಚರಣೆಯು ಪಾಕ್ ಸಶಸ್ತ್ರ ಪಡೆಗಳ ವೃತ್ತಿಪರತೆಗೆ ಸೂಕ್ತ ನಿದರ್ಶನವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಇರಾನ್ ನಲ್ಲಿರುವ ಏಳು ಭಯೋತ್ಪಾದಕ ಗುರಿಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ. ಪಾಕಿಸ್ತಾನದಿಂದ ಬಲೂಚಿಸ್ತಾನದ ಪ್ರತ್ಯೇಕತೆಗಾಗಿ ಹೋರಾಡುತ್ತಿರುವ ಬಲೂಚಿಸ್ತಾನ ಲಿಬರೇಶನ್ ಫೋರ್ಸ್ ಅನ್ನು ಗುರಿಯಾಗಿರಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಉಭಯದೇಶಗಳಿಗೆ ಸಂಬಂಧಿಸಿದ ವಿಷಯ : ಭಾರತ
ಇರಾನ್ ಮೇಲೆ ಪಾಕ್ನ ಕ್ಷಿಪಣಿ ದಾಳಿಗೆ ಪ್ರತಿಕ್ರಿಯಿಸಿರುವ ಭಾರತವು ಇದು ಉಭಯದೇಶಗಳಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದೆ. ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು‘‘ ಭಾರತದ ಮಟ್ಟಿಗೆ ಹೇಳುವುದಾದರೆ ಭಯೋತ್ಪಾದನೆಯ ವಿರುದ್ಧ ನಾವು ಶೂನ್ಯ ಸಹಿಷ್ಣುತೆಯ ನಿಲುವನ್ನು ಹೊಂದಿದ್ದೇವೆ. ತಮ್ಮ ಆತ್ಮರಕ್ಷಣೆಗಾಗಿ ಈ ದೇಶಗಳು ಕೈಗೊಂಡಿರುವ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ’’ ಎಂದು ಹೇಳಿದ್ದಾರೆ.
ಸಂಘರ್ಷದ ಕೇಂದ್ರಬಿಂದು: ಬಲೂಚಿಸ್ತಾನ
ಬಲೂಚಿಸ್ತಾನವು ಪಾಕಿಸ್ತಾನದ ಅತಿ ದೊಡ್ಡ ಪ್ರಾಂತವಾಗಿದೆ. ಅದು ಆ ದೇಶದ ಶೇ.40ರಷ್ಟು ನೈಸರ್ಗಿಕ ಅನಿಲವು ಬಲೂಚಿಸ್ತಾನದಲ್ಲಿಯೇ ಉತ್ಪಾದನೆಯಾಗುತ್ತದೆ. ಚೀನಾದ ತಥಾಕಥಿತ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನ ಮಹತ್ವದ ಚೆಕ್ ಪಾಯಿಂಟ್ ಇದಾಗಿದೆ. ಆಯಕಟ್ಟಿನ ದೃಷ್ಟಿಯಿಂದ ಬಲೂಚಿಸ್ತಾನ ಅತ್ಯಂತ ಮಹತ್ವದ ಪ್ರಾಂತವಾಗಿದ್ದರೂ, ಪಾಕಿಸ್ತಾನದ ಕೇಂದ್ರೀಯ ನಾಯಕತ್ವವು ಅದನ್ನು ಕಡೆಗಣಿಸುತ್ತಾ ಬಂದಿತ್ತು. 1948ರಲ್ಲಿ ಪಾಕಿಸ್ತಾನ ಸೃಷ್ಟಿಯಾದಾಗ, ಬಲೂಚಿಸ್ತಾನವನ್ನು ಅದಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಆ ಬಳಿಕ ಬಲೂಚಿಸ್ತಾನದಲ್ಲಿ ಪ್ರತ್ಯೇಕ ರಾಷ್ಟ್ರದ ಚಳವಳಿ ಆರಂಭಗೊಂಡಿತ್ತು.
ಬಲೂಚಿಸ್ತಾನ ಪ್ರಾಂತವು ಬಲೂಚ್ ಬುಡಕಟ್ಟಿನ ಜನರ ಬಾಹುಳ್ಯದ ಪ್ರದೇಶವಾಗಿದೆ. ಈ ಪ್ರಾಂತವು ಮೂರು ಪ್ರದೇಶಗಳಾಗಿ ವಿಭಜನೆಗೊಂಡಿದೆ. ಬಲೂಚಿಸ್ತಾನದ ಉತ್ತರ ಭಾಗವು ಈಗಿನ ಅಫ್ಘಾನಿಸ್ತಾನದಲ್ಲಿದೆ. ಇರಾನ್ ಗೆ ಸೇರಿದ ಪಶ್ಚಿಮ ಪ್ರದೇಶವನ್ನು ಸಿಸ್ತಾನ್-ಬಲೂಚಿಸ್ತಾನ್ ಎಂದು ಕರೆಯಲಾಗುತ್ತದೆ ಹಾಗೂ ಉಳಿದ ಭಾಗವು ಪಾಕಿಸ್ತಾನದಲ್ಲಿಯೇ ಉಳಿದುಕೊಂಡಿದೆ. ಈ ಪ್ರದೇಶವು ಬ್ರಿಟಿಷ್ ಕಾಲದಿಂದಲೂ ಅಧಿಕಾರಕ್ಕಾಗಿ ಸಂಘರ್ಷದ ಕೇಂದ್ರವಾಗಿ ಪರಿಣಮಿಸಿದೆ.