ಕಾಶ್ಮೀರಿಗಳ ಸ್ವಾತಂತ್ರ್ಯದ ಕುರಿತು ನಿರ್ಣಯಕ್ಕೆ ಪಾಕ್ ಪ್ರಧಾನಿ ಮನವಿ
ಇಸ್ಲಾಮಾಬಾದ್: ಕಾಶ್ಮೀರಿಗಳು ಮತ್ತು ಫೆಲೆಸ್ತೀನೀಯರ ಸ್ವಾತಂತ್ರ್ಯದ ಕುರಿತು ನಿರ್ಣಯವನ್ನು ಅಂಗೀಕರಿಸಬೇಕು ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಝ್ ಷರೀಫ್ ದೇಶದ ಸಂಸತ್ತಿಗೆ ಮನವಿ ಮಾಡಿದ್ದಾರೆ.
ಪ್ರಧಾನಿಯಾಗಿ ಆಯ್ಕೆಗೊಂಡ ಬಳಿಕ ಸಂಸತ್ ಸದಸ್ಯರನ್ನುದ್ದೇಶಿಸಿ ಮಾಡಿದ ಪ್ರಥಮ ಭಾಷಣದಲ್ಲಿ ಅವರು ಗಾಝಾದಲ್ಲಿ ಈಗ ಇರುವ ಪರಿಸ್ಥಿತಿಯ ಬಗ್ಗೆ ಜಾಗತಿಕ ಮೌನವನ್ನು ಟೀಕಿಸಿದರು. ಸಂಸತ್ ನ ಎಲ್ಲಾ ಸದಸ್ಯರೂ ಪಕ್ಷಬೇಧ ಮರೆತು ಒಂದಾಗಬೇಕು ಮತ್ತು ಕಾಶ್ಮೀರಿಗಳು ಹಾಗೂ ಫೆಲೆಸ್ತೀನೀಯರ ಸ್ವಾತಂತ್ರ್ಯಕ್ಕಾಗಿ ನಿರ್ಣಯ ಅಂಗೀಕರಿಸಬೇಕು ಎಂದರು.
ಪಾಕಿಸ್ತಾನ ಯಾವುದೇ ದೊಡ್ಡ ಆಟದ ಭಾಗವಾಗದು. ನಮ್ಮ ಸರಕಾರ ಮಿತ್ರರನ್ನು ಹೆಚ್ಚಿಸಲು ಆದ್ಯತೆ ನೀಡುತ್ತದೆ. ನೆರೆಹೊರೆಯವರು ಸೇರಿದಂತೆ ಪ್ರಮುಖ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ನಿರ್ಮಿಸಲು ಮತ್ತು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು , ಆದರೆ ಸಂಸತ್ತನ್ನು ನಡೆಸುವ ಎಲ್ಲಾ ಖರ್ಚುಗಳಿಗೂ ಸಾಲ ಪಡೆಯುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದು ಈ ದೇಶ ಎದುರಿಸುತ್ತಿರುವ ಅತೀ ದೊಡ್ಡ ಸವಾಲಾಗಿದೆ ಎಂದು ಹೇಳಿದರು.