ಸರಕಾರಿ ಕಾರ್ಯಕ್ರಮಗಳಲ್ಲಿ ರೆಡ್ಕಾರ್ಪೆಟ್ ಶಿಷ್ಟಾಚಾರ ಕೈಬಿಟ್ಟ ಪಾಕಿಸ್ತಾನ

Update: 2024-03-31 18:23 GMT

Photo Credit: HANDOUT

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ವೆಚ್ಚ ಕಡಿತದ ಕ್ರಮವಾಗಿ ಸರಕಾರದ ಕಾರ್ಯಕ್ರಮಗಳಲ್ಲಿ ರೆಡ್ಕಾರ್ಪೆಟ್(ರತ್ನಗಂಬಳಿ ಹಾಸಿ ನೀಡುವ ವಿಶೇಷ ಮರ್ಯಾದೆ) ಶಿಷ್ಟಾಚಾರವನ್ನು ನಿಷೇಧಿಸಿದೆ.

ಕೇಂದ್ರ ಸರಕಾರದ ಸಚಿವರು ಮತ್ತು ಉನ್ನತ ಅಧಿಕಾರಿಗಳು ಉಪಸ್ಥಿತರಿರುವ ಸರಕಾರಿ ಕಾರ್ಯಕ್ರಮಗಳಲ್ಲಿ ರತ್ನಗಂಬಳಿ ಹಾಸುವ ಶಿಷ್ಟಾಚಾರದ ಬಗ್ಗೆ ಪ್ರಧಾನಿ ಶಹಬಾಝ್ ಷರೀಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಇಂತಹ ಅನಗತ್ಯ ವೆಚ್ಚಗಳನ್ನು ತಕ್ಷಣದಿಂದಲೇ ಕಡಿತಗೊಳಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿ ರಾಜತಾಂತ್ರಿಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಮಾತ್ರ ರತ್ನಗಂಬಳಿ ಶಿಷ್ಟಾಚಾರ ಅನುಸರಿಸಲು ನಿರ್ಧರಿಸಲಾಗಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

ಸಾರ್ವಜನಿಕ ಹಣವನ್ನು ಜವಾಬ್ದಾರಿಯುತ ರೀತಿಯಲ್ಲಿ ಮತ್ತು ಅಗತ್ಯದ ಖರ್ಚುಗಳಿಗೆ ಮಾತ್ರ ಬಳಸಲು ಸರಕಾರ ನಿರ್ಧರಿಸಿದೆ. ಮಿತವ್ಯಯ ಕ್ರಮಗಳು ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಮಿತವ್ಯಯದ ಕ್ರಮವಾಗಿ ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ಹಾಗೂ ಅವರ ಸಂಪುಟದ ಸಚಿವರು ಕಳೆದ ತಿಂಗಳು ಘೋಷಿಸಿದ್ದರು. ವೇತನ ಮತ್ತು ಸವಲತ್ತು ಪಡೆಯುವುದಿಲ್ಲ ಎಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಆಸಿಫ್ ಆಲಿ ಝರ್ದಾರಿ ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News