ಪಾಕಿಸ್ತಾನ | ಹೊಸದಾಗಿ ಚುನಾಯಿತ ಸಂಸತ್ತಿನ ಪ್ರಮಾಣವಚನ ಸ್ವೀಕಾರ
ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ಅವರ ಬೆಂಬಲಿಗರ ತೀವ್ರ ಪ್ರತಿಭಟನೆಯ ನಡುವೆ ಪಾಕಿಸ್ತಾನದಲ್ಲಿ ಹೊಸದಾಗಿ ಚುನಾಯಿತಗೊಂಡ ಸಂಸತ್ತು ಗುರುವಾರ ಪ್ರಮಾಣವಚನ ಸ್ವೀಕರಿಸಿದೆ.
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಭ್ಯರ್ಥಿಗಳ ಬೆಂಬಲ ಪಡೆದಿರುವ ಸುನ್ನಿ ಇತ್ತೆಹಾದ್ ಕೌನ್ಸಿಲ್(ಎಸ್ಐಸಿ) ಪಕ್ಷದ ಸದಸ್ಯರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದರು.
ಫೆಬ್ರವರಿ 8ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಪಿಟಿಐ ಬೆಂಬಲಿಗರು ಅತ್ಯಧಿಕ ಸ್ಥಾನಗಳಲ್ಲಿ ಗೆದ್ದಿದ್ದರು. ಆದರೆ 2ನೇ ಸ್ಥಾನ ಪಡೆದಿದ್ದ ಮಾಜಿ ಪ್ರಧಾನಿ ನವಾಝ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್) ಪಕ್ಷ ಮತ್ತು 3ನೇ ಸ್ಥಾನದಲ್ಲಿರುವ ಮಾಜಿ ಸಚಿವ ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಸಮ್ಮಿಶ್ರ ಸರಕಾರ ರಚಿಸಲು ಮೈತ್ರಿ ಮಾಡಿಕೊಂಡಿವೆ.
ಹೊಸದಾಗಿ ಚುನಾಯಿತಗೊಂಡಿರುವ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯತ್ತ ದಾಖಲೆ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದಾಗ ಪ್ರತಿಭಟನೆ ನಡೆಸುತ್ತಿದ್ದ ಎಸ್ಐಸಿ ಮತ್ತು ಪಿಟಿಐ ಸದಸ್ಯರು ` ಪಾಕಿಸ್ತಾನವನ್ನು ಯಾರು ರಕ್ಷಿಸುತ್ತಾರೆ..? ಇಮ್ರಾನ್ ಖಾನ್.. ಇಮ್ರಾನ್ ಖಾನ್' ಎಂದು ಘೋಷಣೆ ಕೂಗಿದರು. `ಇಮ್ರಾನ್ರನ್ನು ತಕ್ಷಣ ಬಿಡುಗಡೆಗೊಳಿಸಿ' ಎಂದು ಆಗ್ರಹಿಸುವ ಬ್ಯಾನರ್ ಅನ್ನು ಪ್ರದರ್ಶಿಸಿದರು. ಬಿಗಿ ಭದ್ರತೆಯ ನಡುವೆ ಅಧಿವೇಶನ ನಡೆದಿದೆ. ಪ್ರೇಕ್ಷಕರ ಗ್ಯಾಲರಿಗೆ ಸಂದರ್ಶಕರ ಪಾಸ್ ರದ್ದುಗೊಳಿಸಲಾಗಿತ್ತು. ಮಾರ್ಚ್ 4ರಂದು ಪ್ರಧಾನಿ ಹುದ್ದೆಗೆ ಚುನಾವಣೆ ನಡೆಯಲಿದ್ದು ಪಿಎಂಎಲ್-ಎನ್, ಪಿಪಿಪಿ ಮೈತ್ರಿಕೂಟದ ಶಹಬಾಝ್ ಷರೀಫ್, ಪಿಟಿಐ - ಎಸ್ಐಸಿ ಬೆಂಬಲಿತ ಅಭ್ಯರ್ಥಿ ಒಮರ್ ಅಯೂಬ್ಖಾನ್ ಕಣದಲ್ಲಿದ್ದಾರೆ.
ಈ ವಾರದ ಆರಂಭದಲ್ಲಿ, ಇಮ್ರಾನ್ಖಾನ್ ಬೆಂಬಲಿಗರು ಸರಕಾರ ರಚಿಸಲಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದ ವಿಧಾನಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿದ್ದ ಕೆಲವರು ಸದಸ್ಯರತ್ತ ಚಪ್ಪಲಿಗಳನ್ನು ತೂರಿದ್ದರು. ಈ ಮಧ್ಯೆ, ಸಂಸತ್ನಲ್ಲಿ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿರುವ 70 ಸ್ಥಾನಗಳನ್ನು ಪಕ್ಷಗಳು ಗೆದ್ದಿರುವ ಸ್ಥಾನಗಳ ಪ್ರಕಾರ ಹಂಚಿಕೆ ಮಾಡುವ ವಿಷಯದಲ್ಲಿ ವಿವಾದ ಮೂಡಿದೆ. ಎಸ್ಐಸಿ ಯಾವುದೇ ಸ್ಥಾನಗಳನ್ನು ಗೆದ್ದಿಲ್ಲದಿದ್ದರೂ ಪಿಟಿಐ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಬೆಂಬಲ ಪಡೆದಿದ್ದು ಮೀಸಲು ಸ್ಥಾನ ಪಡೆಯಲು ಅರ್ಹವೇ ಎಂಬ ಬಗ್ಗೆ ಚುನಾವಣಾ ಆಯೋಗ ಇನ್ನಷ್ಟೇ ತೀರ್ಪು ನೀಡಬೇಕಿದೆ.