ನೈಜರ್ ನಲ್ಲಿ ಕ್ಷಿಪ್ರಕ್ರಾಂತಿ: ತಾನೇ ದೇಶದ ಮುಖಂಡ ಎಂದು ಘೋಷಿಸಿಕೊಂಡ ಸೇನಾ ಮುಖ್ಯಸ್ಥ

Update: 2023-07-29 17:21 GMT

ನಿಯಾಮೆ: ಪಶ್ಚಿಮ ಆಫ್ರಿಕಾದ ನೈಜರ್ ದೇಶದಲ್ಲಿ ಕ್ಷಿಪ್ರಕ್ರಾಂತಿಯ ಮೂಲಕ ಅಧ್ಯಕ್ಷರನ್ನು ಪದಚ್ಯುತಗೊಳಿಸಿದ್ದ ಪ್ರೆಸಿಡೆನ್ಶಿಯಲ್ ಗಾರ್ಡ್‍ನ ಮುಖ್ಯಸ್ಥ ಕರ್ನಲ್ ಮೇಜರ್ ಅಬ್ದ್ರಾಮನ್ ಷಿಯಾನಿ, ತಾನೇ ದೇಶದ ಮುಖಂಡ ಎಂದು ಘೋಷಿಸಿಕೊಂಡಿದ್ದು, ಯಾವುದೇ ವಿದೇಶಿ ಸೇನೆ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಷಿಯಾನಿ `ಮಾತೃಭೂಮಿಯ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದೇನೆ' ಎಂದು ಘೋಷಿಸಿದ್ದಾರೆ. ಅವರು 2011ರಿಂದ ಪ್ರೆಸಿಡೆನ್ಷಿಯಲ್ ಗಾರ್ಡ್‍ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ ದಂಗೆ ಅನಿವಾರ್ಯವಾಗಿತ್ತು. ದೇಶದ ವ್ಯವಹಾರದಲ್ಲಿ ಯಾವುದೇ ವಿದೇಶಿ ಸೇನೆ ಮಧ್ಯಪ್ರವೇಶಿಸಿದರೂ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಕೆಲವು ಶಕ್ತಿಗಳು ಮುಖಾಮುಖಿಯ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಇದು ನೈಜೀರಿಯನ್ ಜನತೆಯ ಹತ್ಯಾಕಾಂಡ ಮತ್ತು ದೊಂಬಿಯಲ್ಲಿ ಅಂತ್ಯವಾಗಲಿದೆ ಎಂಬುದನ್ನು ಆ ಶಕ್ತಿಗಳು ಅರಿತುಕೊಳ್ಳಬೇಕು ಎಂದು ಷಿಯಾನಿ ಎಚ್ಚರಿಸಿದ್ದಾರೆ.

ಈ ಮಧ್ಯೆ, ನೈಜರ್‍ನಲ್ಲಿನ ದಂಗೆಯ ಬಳಿಕ ಷಿಯಾನಿ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ಮುಹಮ್ಮದ್ ಬಝೌಮ್ ಈಗಲೂ ದೇಶದ ಅಧ್ಯಕ್ಷರೆಂದು ತಾನು ಪರಿಗಣಿಸುವುದಾಗಿ ಫ್ರಾನ್ಸ್ ಹೇಳಿದ್ದು ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತ ಸರಕಾರದ ಮರುಸ್ಥಾಪನೆ ಆಗಬೇಕು ಎಂದು ಫ್ರಾನ್ಸ್ ಎಚ್ಚರಿಸಿದೆ. ಸೇನೆಯ ದಂಗೆಯು ಆಫ್ರಿಕಾಕ್ಕೆ ಗಂಭೀರ ಹಿನ್ನಡೆಯಾಗಿದೆ ಎಂದು ಕೆನ್ಯಾ ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News