ಇಲಿಗಳ ಕಾಟ: ಶ್ರೀಲಂಕಾ ಏರ್ ಲೈನ್ ವಿಮಾನ ಸಂಚಾರ 3 ದಿನ ರದ್ದು
ಕೊಲಂಬೊ: ಇಲಿಗಳ ಕಾಟದಿಂದಾಗಿ ಶ್ರೀಲಂಕಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಶ್ರೀಲಂಕಾ ಏರ್ ಲೈನ್‍ನ ವಿಮಾನ 3 ದಿನ ಹಾರಾಟ ಸ್ಥಗಿತಗೊಳಿಸಿದ ಘಟನೆ ವರದಿಯಾಗಿದೆ.
ಶ್ರೀಲಂಕಾ ಏರ್ ಲೈನ್ಸ್‍ನ ಏರ್‍ಬಸ್ ಎ330 ಪಾಕಿಸ್ತಾನದ ಲಾಹೋರ್ ನಗರದಿಂದ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ಪ್ರಯಾಣ ಆರಂಭಿಸಿತ್ತು. ಪ್ರಯಾಣದ ನಡುವೆ ವಿಮಾನದ ಕಾಕ್ ಪೀಟ್‍ನಲ್ಲಿ ಇಲಿ ಕಂಡುಬಂದಿದೆ. ಮೇಲ್ನೋಟಕ್ಕೆ ಇಲಿಯಿಂದ ಯಾವುದೇ ಸಮಸ್ಯೆ ಕಂಡುಬರದಿದ್ದರೂ ಇಲಿಯನ್ನು ಹಿಡಿಯದೆ ವಿಮಾನದ ಪ್ರಯಾಣ ಮುಂದುವರಿಸುವುದು ಅಪಾಯಕಾರಿ ಆದ್ದರಿಂದ ಕೊಲಂಬೊದಲ್ಲಿ ಭೂಸ್ಪರ್ಷ ಮಾಡಿದ ಬಳಿಕ ವಿಮಾನವನ್ನು ಕೂಲಂಕುಷ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದ ಹಾರಾಟವನ್ನು 3 ದಿನ ಸ್ಥಗಿತಗೊಳಿಸಲಾಗಿದೆ.
ಇಂಜಿನ್‍ಗಳ ಕಡ್ಡಾಯ ಕೂಲಂಕುಷ ಪರೀಕ್ಷೆಗೆ ಶುಲ್ಕ ಪಾವತಿಸಲು ವಿದೇಶಿ ವಿನಿಮಯದ ಕೊರತೆಯಿದೆ. ಕಡೆಗೂ ಇಲಿ ವಿಮಾನದ ಇಂಜಿನ್‍ನ ಅಡಿಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ 3 ದಿನ ಪ್ರಯಾಣ ಸ್ಥಗಿತಗೊಳಿಸಿದ್ದು ವಿಮಾನದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನಯಾನ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರಕಾರಿ ಸ್ವಾಮ್ಯದ ಶ್ರೀಲಂಕಾ ಏರ್ ಲೈನ್ಸ್ ಸಂಸ್ಥೆ 2023ರ ಮಾರ್ಚ್ ಅಂತ್ಯದ ವೇಳೆಗೆ 1.8 ಶತಕೋಟಿ ಡಾಲರ್ ನಷ್ಟು ನಷ್ಟದಲ್ಲಿತ್ತು. ನಷ್ಟದ ಹೊರೆ ತಪ್ಪಿಸಲು ಈ ವಿಮಾನಸಂಸ್ಥೆಯನ್ನು ಮಾರಾಟ ಮಾಡಲು ಸರಕಾರ ಮುಂದಾಗಿದ್ದು, ಇದುವರೆಗೆ ಯಾವುದೇ ಸಂಸ್ಥೆ ಆಸಕ್ತಿ ತೋರಿಸಿಲ್ಲ. ಇಂತಹ ಸರಕಾರಿ ಸ್ವಾಮ್ಯದ ಸಂಸ್ಥೆಗಳು ರಾಷ್ಟ್ರದ ಬಜೆಟ್ ಮೇಲೆ ಭಾರೀ ಹೊರೆಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಎಚ್ಚರಿಸಿದೆ.
ʼವಿಮಾನದಲ್ಲಿ ಇಲಿ ಕಂಡುಬಂದಿರುವುದು ಏರ್ ಲೈನ್ಸ್ ಅನ್ನು ಖರೀದಿಸಲು ಆಸಕ್ತಿ ತೋರಿರುವ ಹೂಡಿಕೆದಾರರನ್ನು ಹೆದರಿಸಬಹುದು' ಎಂದು ವಿಮಾನಯಾನ ಸಚಿವ ನಿರ್ಮಲ್ ಸಿರಿಪಾಲ ಡಿ'ಸಿಲ್ವ ಹೇಳಿದ್ದಾರೆ.