ಮನುಷ್ಯರಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರ ಪ್ರಕರಣ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನೆವಾ: ಮಾನವರು ಸೇರಿದಂತೆ ಹೊಸ ವರ್ಗಗಳಿಗೆ ಎಚ್5ಎನ್1 ಹಕ್ಕಿಜ್ವರ ಕ್ಷಿಪ್ರವಾಗಿ ಹರಡುತ್ತಿರುವ ಬಗ್ಗೆ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಇದು ಮಾನವರಿಗೆ ಅತೀ ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಜಿನೆವಾದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಜೆರೆಮಿ ಫರಾರ್ `ಇದನ್ನು ಅಗಾಧ ಆತಂಕದ ಸೋಂಕು ಎಂದು ವರ್ಗೀಕರಿಸಬಹುದು' ಎಂದರು. ಮಾನವರಲ್ಲಿ ಈ ತಳಿಗೆ ರೋಗನಿರೋಧಕ ಶಕ್ತಿ ಇಲ್ಲದಿರುವುದರಿಂದ ವೈರಸ್ ಮಾನವನಲ್ಲಿ ಹರಡಿದರೆ ಮತ್ತೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿ ಪರಿಣಮಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಹಕ್ಕಿಜ್ವರ ಏಕಾಏಕಿ 2020ರಲ್ಲಿ ಉಲ್ಬಣಗೊಂಡಿದೆ ಮತ್ತು ಲಕ್ಷಾಂತರ ಕೋಳಿಗಳ ಸಾವಿಗೆ ಕಾರಣವಾಗಿದೆ. ಕಾಡು ಪಕ್ಷಿಗಳು ಮತ್ತು ಭೂಮಿ ಹಾಗೂ ಸಮುದ್ರದಲ್ಲಿರುವ ಸಸ್ತನಿಗಳಲ್ಲೂ ರೋಗಲಕ್ಷಣ ಕಾಣಿಸಿಕೊಂಡಿದೆ. ಈ ರೀತಿಯ ಸೋಂಕುಗಳಿಗೆ ಒಳಗಾಗುವುದಿಲ್ಲ ಎಂದು ಭಾವಿಸಲಾಗಿದ್ದ ಹಸುಗಳು ಹಾಗೂ ಆಡುಗಳು ಕಳೆದ ತಿಂಗಳು ಈ ಪಟ್ಟಿಗೆ ಸೇರ್ಪಡೆಗೊಂಡಿರುವ ಬಗ್ಗೆ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಚ್5ಎನ್1 ಸೋಂಕು ಜಾಗತಿಕ ಪ್ರಾಣಿಗಳ ಸಾಂಕ್ರಾಮಿಕವಾಗಿದೆ ಎಂದು ಜೆರೆಮಿ ಫರಾರ್ ಹೇಳಿದ್ದಾರೆ.
ಸೋಂಕಿಗೆ ಒಳಗಾದ ಬಾತುಕೋಳಿಗಳು ಹಾಗೂ ಕೋಳಿಗಳಿಂದ ಸಸ್ತನಿಗಳಿಗೆ ಸೋಂಕು ತಗುಲುತ್ತದೆ. ಈ ವೈರಸ್ ಈಗ ವಿಕಸನಗೊಂಡಿದ್ದು ಮಾನವನಿಗೆ ತಗುಲುವ ಸಾಮಥ್ರ್ಯವನ್ನು ಬೆಳೆಸಿಕೊಂಡಿದ್ದು ನಂತರ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಮಥ್ರ್ಯ ಬೆಳೆಸಿಕೊಳ್ಳಬಹುದು ಎಂಬ ಆತಂಕ ಮೂಡಿದೆ. ಪ್ರಾಣಿಗಳ ಸಂಪರ್ಕದ ಮೂಲಕ ಮನುಷ್ಯರು ಸೋಂಕಿಗೆ ಒಳಗಾದ ನೂರಾರು ಪ್ರಕರಣಗಳಲ್ಲಿ ಮರಣ ಪ್ರಮಾಣವು ಅಸಾಧಾರಣವಾಗಿ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೋಂಕುಬಾಧಿತ ಸಸ್ತನಿಯ ಸಂಪರ್ಕಕ್ಕೆ ಬಂದಾಗ ವೈರಸ್ ಮಾನವನಿಗೆ ಹರಡುವ ಸಾಧ್ಯತೆಯಿದೆ. ಯಾಕೆಂದರೆ ಈ ವೈರಸ್ ಹೊಸ ಆಶ್ರಯದಾತರನ್ನು ಹುಡುಕುತ್ತಿರುತ್ತದೆ. ಇದು ನಿಜಕ್ಕೂ ಕಳವಳದ ವಿಷಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಚ್5ಎನ್1ಗೆ ಲಸಿಕೆಗಳು ಹಾಗೂ ಚಿಕಿತ್ಸಕಗಳ ಅಭಿವೃದ್ಧಿಗಾಗಿ ಪ್ರಯತ್ನಗಳು ಮುಂದುವರಿದಿದೆ. ವೈರಸ್ ಅನ್ನು ಪತ್ತೆಹಚ್ಚುವ ಸಾಮಥ್ರ್ಯವನ್ನು ವಿಶ್ವದಾದ್ಯಂತ ಪ್ರಾದೇಶಿಕ ಮತ್ತು ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಜೆರೆಮಿ ಫರಾರ್ ಹೇಳಿದ್ದಾರೆ.
2003ರಿಂದ 2024ರ ಎಪ್ರಿಲ್ 1ರವರೆಗಿನ ಅವಧಿಯಲ್ಲಿ 23 ದೇಶಗಳಾದ್ಯಂತ 889 ಮಂದಿಯಲ್ಲಿ ಹಕ್ಕಿಜ್ವರದ ಪ್ರಕರಣ ಮತ್ತು ಇದರಲ್ಲಿ 463 ಸಾವಿನ ಪ್ರಕರಣ ದಾಖಲಾಗಿದೆ. ಮರಣ ಪ್ರಮಾಣವು 52% ಇರುವುದು ಅತ್ಯಂತ ಆತಂಕಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಮೆರಿಕದಲ್ಲಿ ಮನುಷ್ಯರಲ್ಲಿ ಹಕ್ಕಿಜ್ವರದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.