ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣಗೊಳ್ಳುವ ಅಪಾಯ : ವಿಶ್ವಸಂಸ್ಥೆ ಕಳವಳ
ಜಿನೆವಾ : ಲೆಬನಾನ್‍ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಮತ್ತು ಹಿಂಸಾಚಾರ ಉಲ್ಬಣಿಸಿರುವ ಬಗ್ಗೆ ವಿಶ್ವಸಂಸ್ಥೆ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು ಲೆಬನಾನ್‍ನಲ್ಲಿ ವರದಿಯಾಗಿರುವ ದಾಳಿ ಮತ್ತು ಹೇಳಿಕೆಗಳು ಮಧ್ಯಪ್ರಾಚ್ಯ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದೆ.
`ಲೆಬನಾನ್‍ನಲ್ಲಿ ಹಿಂಸಾಚಾರ ಉಲ್ಬಣಿಸಿರುವ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳಗೊಂಡಿದೆ. ಸಂವಹನ ಸಾಧನಗಳು, ಪೇಜರ್ ಗಳಲ್ಲಿ ನಡೆದ ದಾಳಿಗಳು, ಬಳಿಕ ರಾಕೆಟ್ ದಾಳಿ, ಎರಡೂ ಕಡೆಯವರ ನಡುವೆ ಗುಂಡಿನ ದಾಳಿಯ ವಿನಿಮಯ ಸಂಘರ್ಷ ಉಲ್ಬಣಿಸುವುದನ್ನು ಸ್ಪಷ್ಟವಾಗಿಸಿದೆ' ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವೀನಾ ಶಾಂದಾಸಾನಿಯನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಈ ಮಧ್ಯೆ, ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಸಂಘರ್ಷ ವ್ಯಾಪಕಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟೆಲ್‍ಅವೀವ್‍ನಲ್ಲಿ ಭದ್ರತಾ ಪಡೆಗಳ ಸನ್ನದ್ಧತೆಯ ಪರಿಶೀಲನೆ ನಡೆಸಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಆಂತರಿಕ ಭದ್ರತಾ ಪಡೆಯ ಆದೇಶಗಳಿಗೆ ಸಾರ್ವಜನಿಕರು ಶಿಸ್ತು ಮತ್ತು ಸಂಪೂರ್ಣ ವಿಧೇಯತೆಯನ್ನು ತೋರುವ ಸಮಯ ಇದಾಗಿದೆ ಎಂದು ಗ್ಯಾಲಂಟ್ ಹೇಳಿರುವುದಾಗಿ ವರದಿಯಾಗಿದೆ. ಹಿಜ್ಬುಲ್ಲಾ ನೆಲೆಗಳ ಮೇಲೆ ತೀವ್ರ ದಾಳಿ ನಡೆಸಲು ಮಿಲಿಟರಿ ಮುಖ್ಯಸ್ಥ ಲೆ|ಜ| ಹೆರ್ಝೆಯ್ ಹಲೆವಿ ಅನುಮತಿ ನೀಡುವ ವೀಡಿಯೋವನ್ನೂ ಐಡಿಎಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಮಿಲಿಟರಿ ಮುಖ್ಯಸ್ಥರ ಆದೇಶದ ಬಳಿಕ ಇವತ್ತು ಶತ್ರುಗಳ 300ಕ್ಕೂ ಅಧಿಕ ನೆಲೆಗಳಿಗೆ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಹೇಳಿದೆ. ಲೆಬನಾನ್‍ನ ಸಿನಾಯಿ ಗ್ರಾಮದಲ್ಲಿ ಆಗಸದಲ್ಲಿ ಇಸ್ರೇಲ್‍ನ ಜೆಟ್ ವಿಮಾನಗಳು ಬಾಂಬ್ ದಾಳಿ ನಡೆಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.