ದಕ್ಷಿಣ ಇಥಿಯೋಪಿಯಾದಲ್ಲಿ ರಸ್ತೆ ಅಪಘಾತ: 66 ಮಂದಿ ಮೃತ್ಯು
ಇಥಿಯೋಪಿಯಾ: ದಕ್ಷಿಣ ಇಥಿಯೋಪಿಯಾದಲ್ಲಿ ನಡೆದ ಭೀಕರ ರಸ್ತೆ ದುರಂತದಲ್ಲಿ 66 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
"ಈ ಕಾರು ಅಪಘಾತ ಇದುವರೆಗೆ 66 ಜೀವಗಳನ್ನು ಬಲಿಪಡೆದಿದೆ" ಎಂದು ಸಿದಾಮಾ ಪ್ರಾದೇಶಿಕ ಆರೋಗ್ಯ ಬ್ಯೋರೊ ಫೇಸ್ಬುಕ್ ನಲ್ಲಿ ಪ್ರಕಟಿಸಿದೆ. ಬೋನಾ ಜನರಲ್ ಹಾಸ್ಪಿಟಲ್ ನಲ್ಲಿ ನಾಲ್ಕು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದೆ. ಅಪಘಾತದ ಬಗ್ಗೆ ಇತರ ಯಾವುದೇ ವಿವರಗಳನ್ನು ನೀಡಿಲ್ಲ. ಅಪಘಾತದ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ ಮತ್ತು ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದೆ.
ದಕ್ಷಿಣ ಇಥಿಯೋಪಿಯಾದ ಪೂರ್ವ ವಲಯ ಗೆಲಾನಾ ಸೇತುವೆಯಲ್ಲಿ ಈ ದುರಂತ ಸಂಭವಿಸಿದೆ. ಭಾಗಶಃ ಮುಳುಗಿರುವ ವಾಹನದ ಸುತ್ತ ಜನ ಗುಂಪುಗಟ್ಟಿರುವ ಮಬ್ಬು ಚಿತ್ರಗಳನ್ನು ಹೆಲ್ತ್ ಬ್ಯೂರೊ ಪಸರಿಸಿದೆ. ಹಲವು ಮಂದಿ ನೆರವಿಗಾಗಿ ಕಾರ್ಯಾಚರಣೆ ಕೈಗೊಂಡಿರುವುದು ಕಾಣಿಸುತ್ತಿದೆ.
ಮೃತದೇಹಗಳನ್ನು ನೀಲಿ ಟಾರ್ಪಲಿನ್ ಗಳಲ್ಲಿ ಸುತ್ತಿದ ಚಿತ್ರಗಳೂ ಹರಿದಾಡುತ್ತಿವೆ. ಅಪಘಾತ ಸಂತ್ರಸ್ತರ ಕುಟುಂಬಗಳಿಗೆ ಆರೋಗ್ಯ ಬ್ಯೂರೊ ಸಾಂತ್ವನ ಹೇಳಿದ್ದು, ಲಭ್ಯವಾದ ತಕ್ಷಣ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.