ಸಂಯಮ ವಹಿಸುವಂತೆ ಮಧ್ಯಪ್ರಾಚ್ಯ ದೇಶಗಳನ್ನು ಒತ್ತಾಯಿಸಿದ ರಶ್ಯ, ಜರ್ಮನಿ, ಬ್ರಿಟನ್

Update: 2024-04-12 17:07 GMT

ಮಾಸ್ಕೋ : ಸಂಯಮ ವಹಿಸುವಂತೆ ಮಧ್ಯಪ್ರಾಚ್ಯ ದೇಶಗಳನ್ನು ರಶ್ಯ, ಜರ್ಮನಿ ಮತ್ತು ಬ್ರಿಟನ್ ಒತ್ತಾಯಿಸಿವೆ. ಈ ಮಧ್ಯೆ, ವಲಯದಲ್ಲಿ ಭದ್ರತಾ ಅಗತ್ಯಗಳನ್ನು ಪೂರೈಸಲು ತನ್ನ ಪಡೆಗಳನ್ನು ಸಜ್ಜುಗೊಳಿಸಿರುವುದಾಗಿ ಇಸ್ರೇಲ್ ಹೇಳಿದೆ.

ಇರಾನ್ ರಾಜಧಾನಿಗೆ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸುವುದಾಗಿ ಜರ್ಮನಿಯ ಲುಫ್ತಾನ್ಸಾ ಏರ್‍ಲೈನ್ಸ್ ಘೋಷಿಸಿದೆ. ಮಧ್ಯಪ್ರಾಚ್ಯಕ್ಕೆ (ವಿಶೇಷವಾಗಿ ಇಸ್ರೇಲ್, ಲೆಬನಾನ್ ಮತ್ತು ಫೆಲೆಸ್ತೀನ್) ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ರಶ್ಯ ಎಚ್ಚರಿಕೆ ನೀಡಿದೆ. ದಮಾಸ್ಕಸ್‍ನಲ್ಲಿ ಇರಾನ್ ದೂತಾವಾಸದ ಮೇಲಿನ ದಾಳಿಯ ಹೊಣೆಯನ್ನು ಇಸ್ರೇಲ್ ವಹಿಸಿಕೊಂಡಿಲ್ಲ. ಆದರೆ ದೂತಾವಾಸದ ಮೇಲಿನ ದಾಳಿ ಇರಾನ್‍ನ ನೆಲದ ಮೇಲಿನ ದಾಳಿಗೆ ಸಮವಾಗಿರುವುದರಿಂದ ಇಸ್ರೇಲ್ ಶಿಕ್ಷೆಗೆ ಒಳಗಾಗಬೇಕು ಮತ್ತು ಶಿಕ್ಷೆಗೆ ಒಳಗಾಗಲಿದೆ' ಎಂದು ಇರಾನ್‍ನ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ಘೋಷಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ದಾಳಿಯನ್ನು ಖಂಡಿಸಿ ಅಪರಾಧಿಗಳನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿದ್ದರೆ ಈ ಪ್ರತೀಕಾರ ದಾಳಿಯನ್ನು ನಿವಾರಿಸಬಹುದಿತ್ತು ಎಂದು ವಿಶ್ವಸಂಸ್ಥೆಗೆ ಇರಾನ್ ಪ್ರತಿನಿಧಿ ಪ್ರತಿಪಾದಿಸಿದ್ದಾರೆ.

ನಮಗೆ ಯಾರು ಹಾನಿ ಮಾಡುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ. ರಕ್ಷಣಾತ್ಮಕವಾಗಿ ಅಥವಾ ಆಕ್ರಮಣಕಾರಿಯಾಗಿ ಇಸ್ರೇಲ್‍ನ ಭದ್ರತಾ ಅಗತ್ಯಗಳನ್ನು ಪೂರೈಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News