ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳ ಮೇಲಿನ ನಿಷೇಧ ರದ್ದತಿಗೆ ರಶ್ಯ ನಿರ್ಧಾರ
ಮಾಸ್ಕೋ: ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳ ನಿಯೋಜನೆಯ ಮೇಲೆ ಪ್ರಸ್ತಾವಿತ ನಿಷೇಧವನ್ನು ರಶ್ಯ ರದ್ದುಗೊಳಿಸುತ್ತದೆ. ಅಮೆರಿಕ ಇಂತಹ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಆರಂಭಿಸಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್‍ರನ್ನು ಉಲ್ಲೇಖಿಸಿ ಆರ್‍ಐಎ ನ್ಯೂಸ್ ಏಜೆನ್ಸಿ ರವಿವಾರ ವರದಿ ಮಾಡಿದೆ.
ಕಾರ್ಯತಂತ್ರದ ಕ್ಷೇತ್ರದಲ್ಲಿ ಅಮೆರಿಕ ಮತ್ತು ನೇಟೋದ ಅಸ್ಥಿರಗೊಳಿಸುವ ಕ್ರಮಗಳ ಮತ್ತು ಅವುಗಳಿಂದ ಆಗುವ ಬೆದರಿಕೆಯ ವಿಶ್ಲೇಷಣೆಯ ಆಧಾರದಲ್ಲಿ ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ. ಆದ್ದರಿಂದ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳ ನಿಯೋಜನೆಯ ಮೇಲೆ ನಾವು ಪ್ರಸ್ತಾವಿಸಿರುವ ನಿಷೇಧವು ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎಂಬುದು ಸ್ಪಷ್ಟವಾಗಿದೆ ಮತ್ತು ಅದನ್ನು ತ್ಯಜಿಸಬೇಕಾಗಿದೆ. ರಶ್ಯ ಮತ್ತು ಚೀನಾದ ಎಚ್ಚರಿಕೆಗಳನ್ನು ಅಮೆರಿಕ ಸೊಕ್ಕಿನಿಂದ ನಿರ್ಲಕ್ಷಿಸಿದೆ ಮತ್ತು ಪ್ರಾಯೋಗಿಕವಾಗಿ ವಿಶ್ವದ ಬೇರೆ ಬೇರೆ ಕಡೆ ಇಂತಹ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಮುಂದಾಗಿದೆ ಎಂದು ಲಾವ್ರೋವ್ ಹೇಳಿರುವುದಾಗಿ ವರದಿಯಾಗಿದೆ.
ಅಮೆರಿಕ 2019ರಲ್ಲಿ ಮಧ್ಯಂತರ ಶ್ರೇಣಿಯ ಪರಮಾಣು ಪಡೆಗಳ ಒಪ್ಪಂದದಿಂದ ಹಿಂದಕ್ಕೆ ಸರಿದಿತ್ತು. ಅಮೆರಿಕ ಇಂತಹ ಶಸ್ತ್ರಾಸ್ತ್ರಗಳನ್ನು ನಿಯೋಜಿಸದಿದ್ದರೆ ತಾನೂ ನಿಯೋಜಿಸುವುದಿಲ್ಲ ಎಂದು ರಶ್ಯ ಸ್ಪಷ್ಟಪಡಿಸಿತ್ತು ಎಂದವರು ಹೇಳಿದ್ದಾರೆ.