ಬ್ರಿಟನ್ ಗೆ ಅಕ್ರಮವಾಗಿ ಆಗಮಿಸುವ ನಿರಾಶ್ರಿತರಿಗೆ ರುವಾಂಡಾದಲ್ಲಿ ವಾಸ್ತವ್ಯ
ಲಂಡನ್: ಬ್ರಿಟನ್ ನಲ್ಲಿ ಆಶ್ರಯಕೋರಿ ಬಂದವರನ್ನು ಆಫ್ರಿಕನ್ ರಾಷ್ಟ್ರವಾದ ರುವಾಂಡಾಕ್ಕೆ ಕಳುಹಿಸುವುದಕ್ಕೆ ಸರಕಾರಕ್ಕೆ ಅನುಮತಿ ನೀಡುವ ವಿವಾದಾತ್ಮಕ ವಿಧೇಯಕವನ್ನು ಬೆಂಬಲಿಸಿ ಬ್ರಿಟನ್ ಸಂಸತ್ ನ ಬಹುತೇಕ ಸದಸ್ಯರು ಮತಚಲಾಯಿಸಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಭಿನ್ನಮತೀಯರ ಬೆದರಿಕೆಯ ಹೊರತಾಗಿಯೂ, ಈ ವಿಧೇಯಕವು ಬ್ರಿಟಿಶ್ ಸಂಸತಂನ ಕೆಳಮನೆ (ಹೌಸ್ ಆಫ್ ಕಾಮನ್ಸ್)ಯಲ್ಲಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬ್ರಿಟನ್ ಪ್ರಧಾನಿ ರಿಶಿ ಸುನಕ್ ಅವರ ಮಹತ್ವಾಕಾಂಕ್ಷಿ ‘‘ರುವಾಂಡಾ ಸುರಕ್ಷತೆ (ಆಶ್ರಯ ಹಾಗೂ ವಲಸೆ) ವಿಧೇಯಕವು ಹೌಸ್ ಆಫ್ ಕಾಮನ್ಸ್ ನಲ್ಲಿ 320-276 ಮತಗಳೊಂದಿಗೆ ಅಂಗೀಕಾರಗೊಂಡಿತು.
ಕಳೆದ ತಿಂಗಳು ಬ್ರಿಟಿಶ್ ಸಂಸತ್ ನಲ್ಲಿ ಈ ವಿಧೇಯಕವನ್ನು ಮಂಡಿಸಲಾಗಿತ್ತು. ಬ್ರಿಟನ್ನಲ್ಲಿ ಆಶ್ರಯ ಅರಸಿ ಬಂದವರನ್ನು ಪೂರ್ವ ಆಫ್ರಿಕದ ರಾಷ್ಟ್ರವಾದ ರುವಾಂಡಾಕ್ಕೆ ಕಳುಹಿಸುವ ಬ್ರಿಟಿಶ್ ಸರಕಾರದ ಯೋಜನೆಯು ಕಾನೂನುಬಾಹಿರವೆಂದು ಬ್ರಿಟನ್ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಕಾನೂನು ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ವಿಧೇಯಕವನ್ನು ಜಾರಿಗೆ ತಂದಿದೆ.
ಬ್ರಿಟನ್ ಗೆ ಆಗಮಿಸಿದ ನಿರಾಶ್ರಿತರನ್ನು ರುವಾಂಡಾಕ್ಕೆ ಕಳುಹಿಸುವ ಒಪ್ಪಂದಕ್ಕೆ ಈ ಎರಡೂ ದೇಶಗಳು 2022ರಲ್ಲಿ ಸಹಿಹಾಕಿದ್ದವು. ಮಾನವ ಕಳ್ಳಸಾಗಣೆ ಜಾಲಗಳು ಏರ್ಪಾಡು ಮಾಡುವ ಸಣ್ಣ ದೋಣಿಗಳ ಮೂಲಕ ಒಳನುಸುಳುವ ನಿರಾಶ್ರಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಈ ಒಪ್ಪಂದವನ್ನು ಏರ್ಪಡಿಸಲಾಗಿದೆ.
ಬ್ರಿಟನ್ ಗೆ ಆಗಮಿಸುವ ನಿರಾಶ್ರಿತರನ್ನು ರುವಾಂಡಾಕ್ಕೆ ಕಳುಹಿಸಲು ಬ್ರಿಟಿಷ್ ಸರಕಾರ ಬಯಸುತ್ತಿದೆ. ಬ್ರಿಟನ್ ನಲ್ಲಿ ಆಶ್ರಯ ಕೋರಿ ಅವರು ಸಲ್ಲಿಸಿರುವ ಅರ್ಜಿಗಳು ಪರಿಷ್ಕರಣೆಯಾಗುವವರೆಗೆ ಅವರು ರುವಾಂಡಾದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅವರು ಯಶಸ್ವಿಯಾದಲ್ಲಿ, ಬ್ರಿಟನ್ ಗೆ ಹಿಂದಿರುಗಲು ಅವರು ಸಫಲರಾಗುತ್ತಾರೆ. ಇಲ್ಲದೇ ಇದ್ದಲ್ಲಿ ಒಂದೋ ಅವರು ರುವಾಂಡಾದಲ್ಲಿಯೇ ಉಳಿದುಕೊಳ್ಳಬೇಕು, ಇಲ್ಲವೇ ಬೇರೆಡೆ ಆಶ್ರಯ ಕೋರಬಹುದಾಗಿದೆ ಎಂದು ವರದಿ ತಿಳಿಸಿದೆ.