ಬಲವಂತದ ನಾಪತ್ತೆ ಘಟನೆಗಳಲ್ಲಿ ಶೇಖ್ ಹಸೀನಾ ಪಾತ್ರ; ಢಾಕಾದಲ್ಲಿ 8 ರಹಸ್ಯ ಬಂಧನ ಕೇಂದ್ರ: ಬಾಂಗ್ಲಾದೇಶದ ತನಿಖಾ ಆಯೋಗ ವರದಿ
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಆಡಳಿತದ ಉನ್ನತ ಶ್ರೇಣಿಯ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು ಬಲವಂತದ ನಾಪತ್ತೆ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳು ಲಭಿಸಿವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರ ರಚಿಸಿದ್ದ ತನಿಖಾ ಆಯೋಗದ ವರದಿ ಹೇಳಿದೆ.
ಬಲವಂತದ ನಾಪತ್ತೆ ಪ್ರಕರಣಗಳ ವಿಚಾರಣಾ ಆಯೋಗದ ಐವರು ಸದಸ್ಯರ ಸಮಿತಿಯು `ಸತ್ಯದ ಅನಾವರಣ' ಎಂಬ ಶೀರ್ಷಿಕೆಯ ಮಧ್ಯಂತರ ವರದಿಯನ್ನು ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್‍ಗೆ ಶನಿವಾರ ಸಲ್ಲಿಸಿದ್ದು, ಬಲವಂತದ ನಾಪತ್ತೆಗಳ ಪ್ರಕರಣ 3,500ಕ್ಕೂ ಹೆಚ್ಚಿರಬಹುದು ಎಂದು ಅಂದಾಜಿಸಿದೆ. ಬಲವಂತದ ನಾಪತ್ತೆಗಳ ಪ್ರಕರಣಗಳಲ್ಲಿ ಶೇಖ್ ಹಸೀನಾ ಪ್ರಮುಖ ಪಾತ್ರ ವಹಿಸಿರುವುದಕ್ಕೆ ಪುರಾವೆಗಳಿವೆ ಎಂದು ಯೂನುಸ್ ಅವರ ಕಚೇರಿಯ ಮಾಧ್ಯಮ ವಿಭಾಗ ಹೇಳಿದೆ.
ಪದಚ್ಯುತ ಪ್ರಧಾನಿಯ ರಕ್ಷಣಾ ಸಲಹೆಗಾರ ಮೇಜರ್ ಜನರಲ್ (ನಿವೃತ್ತ) ತಾರಿಖ್ ಅಹ್ಮದ್ ಸಿದ್ದಿಕ್, ರಾಷ್ಟ್ರೀಯ ದೂರಸಂಪರ್ಕ ಮೇಲ್ವಿಚಾರಣಾ ಕೇಂದ್ರದ ಮಾಜಿ ಪ್ರಧಾನ ನಿರ್ದೇಶಕ ಮೇ|ಜ| ಝಿಯಾವುಲ್ ಅಹ್ಸಾನ್, ಉನ್ನತ ಪೊಲೀಸ್ ಅಧಿಕಾರಿಗಳಾದ ಮೊನಿರುಲ್ ಇಸ್ಲಾಮ್ ಮತ್ತು ಮುಹಮ್ಮದ್ ಹರೂನ್ ರಶೀದ್ ಹಾಗೂ ಇತರ ಹಲವು ಹಿರಿಯ ಅಧಿಕಾರಿಗಳು ಈ ಪ್ರಕರಣಗಳಲ್ಲಿ ಶಾಮೀಲಾಗಿರುವುದು ಕಂಡು ಬಂದಿದೆ. ರಾಜಧಾನಿ ಢಾಕಾ ಹಾಗೂ ಹೊರವಲಯದಲ್ಲಿ 8 ರಹಸ್ಯ ಬಂಧನಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ವರದಿ ಹೇಳಿದೆ. ಆಗಸ್ಟ್ 5ರಂದು ಶೇಖ್ ಹಸೀನಾ ಆಡಳಿತ ಪದಚ್ಯುತಗೊಂಡಂದಿನಿಂದ ಈ ಅಧಿಕಾರಿಗಳು ಭೂಗತರಾಗಿದ್ದು ವಿದೇಶಕ್ಕೆ ತೆರಳಿರುವರೆಂದು ನಂಬಲಾಗಿದೆ.
ಬಲವಂತದ ಕಣ್ಮರೆಗಳ ಪ್ರಕರಣಗಳನ್ನು ರಹಸ್ಯವಾಗಿ ನಡೆಸುವ ವ್ಯವಸ್ಥಿತ ಪ್ರಕ್ರಿಯೆಯ ಬಗ್ಗೆ ಮಾಹಿತಿ ಲಭಿಸಿದೆ. ಬಲವಂತದ ಕಣ್ಮರೆ ಅಥವಾ ಕಾನೂನು ಬಾಹಿರ ಹತ್ಯೆಗಳನ್ನು ನಡೆಸುವ ವ್ಯಕ್ತಿಗಳಿಗೆ ಬಲಿಪಶುಗಳ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಆಯೋಗದ ಅಧ್ಯಕ್ಷ, ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ಮೈನುಲ್ ಇಸ್ಲಾಮ್ ಚೌಧರಿ ಹೇಳಿದ್ದಾರೆ. ಬಲವಂತದ ಕಣ್ಮರೆಯ 1,676 ದೂರುಗಳನ್ನು ಸ್ವೀಕರಿಸಿದ್ದು ಇದರಲ್ಲಿ 758 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 200 ಮಂದಿ ಅಥವಾ 27%ದಷ್ಟು ಬಲಿಪಶುಗಳು ಹಿಂದಿರುಗಲೇ ಇಲ್ಲ. ಹಿಂದಿರುಗಿದವರನ್ನೂ `ಬಂಧಿಸಲಾಗಿದೆ' ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಮಾರ್ಚ್‍ನಲ್ಲಿ ಮತ್ತೊಂದು ಮಧ್ಯಂತರ ವರದಿಯನ್ನು ಸಲ್ಲಿಸಲಿದ್ದು ಎಲ್ಲಾ ದೂರುಗಳ ಬಗ್ಗೆ ಕೂಲಂಕುಷ ತನಿಖೆಗೆ ಇನ್ನೂ ಕನಿಷ್ಟ ಒಂದು ವರ್ಷದ ಅಗತ್ಯವಿದೆ ಎಂದು ಸಮಿತಿಯ ಸದಸ್ಯರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಜಸ್ಟಿಸ್ ಫರೀದ್ ಅಹ್ಮದ್, ಹಕ್ಕುಗಳ ಕಾರ್ಯಕರ್ತರಾದ ನೂರ್ ಖಾನ್ ಮತ್ತು ಸಜ್ಜದ್ ಹುಸೇನ್, ಉಪನ್ಯಾಸಕ ನಬಿಲಾ ಇದ್ರಿಸ್ ಸಮಿತಿಯ ಸದಸ್ಯರಾಗಿದ್ದಾರೆ.
ಕೆಲವು ಜಂಟಿ ವಿಚಾರಣಾ ಕೊಠಡಿಗಳಿಗೆ ಹಾಗೂ ರಹಸ್ಯ ಬಂಧನ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಬವಣೆಯ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆಯಲು ಬಯಸಿರುವುದಾಗಿ ಯೂನುಸ್ ಹೇಳಿದ್ದಾರೆ. ಬಲವಂತದ ನಾಪತ್ತೆಯನ್ನು ಅಪರಾಧೀಕರಿಸುವ ಹೊಸ ಕಾನೂನನ್ನು ರಚಿಸುವಂತೆ ಸಮಿತಿ ಸಲಹೆ ನೀಡಿದೆ. ಜತೆಗೆ, ಸಶಸ್ತ್ರ ಪೊಲೀಸ್ ಬಟಾಲಿಯನ್ಸ್ ವಿಧಿಯನ್ನು ರದ್ದುಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ.
ತುರ್ತು ಕಾರ್ಯಪಡೆ ಮುಚ್ಚಲು ಶಿಫಾರಸು:
ಶೇಖ್ ಹಸೀನಾ ಆಡಳಿತದ ಅವಧಿಯಲ್ಲಿ ಕುಖ್ಯಾತಿ ಗಳಿಸಿದ್ದ ಸಶಸ್ತ್ರ ಪೊಲೀಸ್ ಪಡೆ(ತುರ್ತು ಕಾರ್ಯಪಡೆ)ಯನ್ನು ತಕ್ಷಣ ಮುಚ್ಚುವಂತೆ ವಿಚಾರಣಾ ಆಯೋಗ ಶಿಫಾರಸು ಮಾಡಿದೆ.
`ರ್ಯಾಪಿಡ್ ಆ್ಯಕ್ಷನ್ ಬಟಾಲಿಯನ್'(ಆರ್‍ಎಬಿ) ಎಂಬ ಹೆಸರಿನ ಸಶಸ್ತ್ರ ಪೊಲೀಸ್ ಪಡೆ ಹಾಗೂ ಅದರ 7 ಹಿರಿಯ ಸದಸ್ಯರ ವಿರುದ್ಧ ಅಮೆರಿಕ 2021ರಲ್ಲಿ ನಿರ್ಬಂಧ ಜಾರಿಗೊಳಿಸಿದೆ. ಈ ಪಡೆ ಹಸೀನಾ ಅವರ 15 ವರ್ಷದ ಅಧಿಕಾರಾವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ವ್ಯಾಪಕ ಅಕ್ರಮ ಎಸಗಿರುವುದಾಗಿ ಆರೋಪಿಸಲಾಗಿದೆ. ನ್ಯಾಯಾಂಗ ವ್ಯವಸ್ಥೆ ನಿಧಾನವಾಗಿರುವ ದೇಶದಲ್ಲಿ ತ್ವರಿತ ಫಲಿತಾಂಶಗಳನ್ನು ಒದಗಿಸುವ ವ್ಯವಸ್ಥೆಯಾಗಿ 2004ರಲ್ಲಿ ಆರ್‍ಎಬಿಯನ್ನು ರಚಿಸಲಾಗಿತ್ತು. ಆದರೆ ಈ ಘಟಕವು ಕಾನೂನುಬಾಹಿರ ಹತ್ಯೆಗಳಿಗೆ ಕುಖ್ಯಾತಿಯನ್ನು ಗಳಿಸಿತು ಹಾಗೂ ಅಪಹರಣ, ಕೊಲೆಗಳ ಮೂಲಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ, ವಿರೋಧಿಗಳನ್ನು ನಿಗ್ರಹಿಸುವ ಮೂಲಕ ಹಸೀನಾ ಅವರ ರಾಜಕೀಯ ಮಹಾತ್ವಾಕಾಂಕ್ಷೆಗಳನ್ನು ಬೆಂಬಲಿಸುತ್ತಿತ್ತು.
ಆರ್‍ಎಬಿ ಎಂದಿಗೂ ಕಾನೂನಿಗೆ ಬದ್ಧವಾಗಿಲ್ಲ ಮತ್ತು ಬಲವಂತದ ನಾಪತ್ತೆಗಳು, ಕಾನೂನು ಬಾಹಿರ ಹತ್ಯೆಗಳು ಮತ್ತು ಅಪಹರಣಗಳನ್ನು ನಡೆಸಿದರೂ ಈ ಅಪರಾಧಗಳಿಂದ ವಿನಾಯಿತಿ ಪಡೆಯುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರ್‍ಎಬಿಯನ್ನು ಮುಚ್ಚುವ ಜತೆಗೆ, ಭಯೋತ್ಪಾದನಾ ವಿರೋಧಿ ಕಾಯ್ದೆ 2009 ಅನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಬಗ್ಗೆ ವರದಿ ಶಿಫಾರಸು ಮಾಡಿದೆ.