ಇಂಡೊ-ಪೆಸಿಫಿಕ್ ವ್ಯಾಪಾರ ಬಣಕ್ಕೆ ಬ್ರಿಟನ್ ಸೇರ್ಪಡೆ
ಲಂಡನ್: ಜಪಾನ್, ಆಸ್ಟ್ರೇಲಿಯಾ ಮತ್ತು ಕೆನಡಾವನ್ನು ಒಳಗೊಂಡಿರುವ ಇಂಡೊ-ಪೆಸಿಫಿಕ್ ವ್ಯಾಪಾರ ಒಕ್ಕೂಟದ 12ನೇ ಸದಸ್ಯನಾಗಿ ಬ್ರಿಟನ್ ರವಿವಾರ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಯುರೋಪಿಯನ್ ಯೂನಿಯನ್ ಅನ್ನು ತೊರೆದ ನಂತರ ತನ್ನ ಜಾಗತಿಕ ವ್ಯಾಪಾರ ಸಂಪರ್ಕವನ್ನು ನಿರ್ಮಿಸಲು ಮತ್ತು ವಲಯದಲ್ಲಿ ತನ್ನ ಸಂಬಂಧಗಳನ್ನು ಆಳಗೊಳಿಸುವುದು ಬ್ರಿಟನ್‍ನ ಉದ್ದೇಶವಾಗಿದೆ.
ಕಾಂಪ್ರಹೆನ್ಸಿವ್ ಆ್ಯಂಡ್ ಪ್ರೋಗ್ರೆಸಿವ್ ಅಗ್ರಿಮೆಂಟ್ ಫಾರ್ ಟ್ರಾನ್ಸ್-ಪೆಸಿಫಿಕ್ ಪಾಟ್ರ್ನರ್‍ಶಿಪ್(ಸಿಪಿಟಿಪಿಪಿ)ಗೆ ಸೇರ್ಪಡೆಗೊಳ್ಳುವುದಾಗಿ ಕಳೆದ ವರ್ಷ ಬ್ರಿಟನ್ ಘೋಷಿಸಿತ್ತು. ಇದರೊಂದಿಗೆ ರವಿವಾರದಿಂದ ಹಾಲಿ 11 ಸದಸ್ಯರಲ್ಲಿ 8 ಸದಸ್ಯರ ಜತೆ (ಬ್ರೂನೈ, ಚಿಲಿ, ಜಪಾನ್, ಮಲೇಶ್ಯಾ, ನ್ಯೂಝಿಲ್ಯಾಂಡ್, ಪೆರು, ಸಿಂಗಾಪುರ ಮತ್ತು ವಿಯೆಟ್ನಾಮ್) ಸಿಪಿಟಿಪಿಪಿ ವ್ಯಾಪಾರ ನಿಯಮಗಳು ಮತ್ತು ಕಡಿಮೆ ಸುಂಕಗಳನ್ನು ಅನ್ವಯಿಸಲು ಬ್ರಿಟನ್‍ಗೆ ಸಾಧ್ಯವಾಗುತ್ತದೆ. 9ನೇ ಸದಸ್ಯನಾದ ಆಸ್ಟ್ರೇಲಿಯಾ ಜತೆಗೆ ಡಿಸೆಂಬರ್ 24ರಂದು ಒಪ್ಪಂದ ಜಾರಿಗೆ ಬರುತ್ತದೆ. ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಬ್ರಿಟನ್ ಸೇರ್ಪಡೆಯನ್ನು ಅನುಮೋದಿಸಿದ 60 ದಿನಗಳ ಬಳಿಕ ಜಾರಿಗೆ ಬರುತ್ತದೆ.