ರಶ್ಯಾದ ಇಂಧನ ಡಿಪೋ ಮೇಲೆ ಉಕ್ರೇನ್ ಡ್ರೋನ್ ದಾಳಿ
ಮಾಸ್ಕೋ: ಮಧ್ಯ ರಶ್ಯದ ಒರಿಯೋಲ್ ಪ್ರಾಂತದಲ್ಲಿ ಇಂಧನ ಸಂಗ್ರಹಣಾಗಾರ(ಡಿಪೋ)ದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಿಂದ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ಕೆಲವು ಮನೆಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ ಎಂದು ಪ್ರಾದೇಶಿಕ ಗವರ್ನರ್ ಆಂಡ್ರೆಯ್ ಕ್ಲಿಚ್ಕೋವ್ ಶನಿವಾರ ಹೇಳಿದ್ದಾರೆ.
ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿ ಸರಣಿ ಡ್ರೋನ್ ದಾಳಿ ನಡೆದಿದ್ದು ಇಂಧನ ಸಂಗ್ರಹಣಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಳಗೆ ಬಿದ್ದ ಡ್ರೋನ್‍ಗಳ ತುಣುಕುಗಳಿಂದ ಹಲವು ಮನೆಗಳ ಕಿಟಕಿಗೆ ಹಾನಿಯಾಗಿದೆ ಎಂದವರು ಹೇಳಿದ್ದಾರೆ. ಕ್ರಸ್ನೋಡೊರ್ ಪ್ರಾಂತದ ದಕ್ಷಿಣದ ಹಲವು ಪ್ರದೇಶಗಳಲ್ಲಿ ಉಕ್ರೇನ್‍ನ ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ. ಉಕ್ರೇನ್‍ನ ಗಡಿಯ ಸನಿಹದಲ್ಲಿರುವ ಬೆಲ್ಗೊರೊಡ್ ಪ್ರಾಂತದಲ್ಲಿ ಉಕ್ರೇನ್‍ನ ಪಡೆಗಳು ಎರಡು ಗ್ರಾಮಗಳ ಮೇಲೆ ದಾಳಿ ನಡೆಸಿದ್ದು ಓರ್ವ ಗಾಯಗೊಂಡಿದ್ದಾನೆ ಎಂದು ಗವರ್ನರ್ ವ್ಯಾಚೆಸ್ಲಾವ್ ಗ್ಲ್ಯಾಡ್ಕೋವ್ ಹೇಳಿದ್ದಾರೆ.