ಹತ್ಯೆ ಭೀತಿ: ಶೇಕ್ ಹಸೀನಾಗೆ ಲ್ಯುಟಿಯೆನ್ಸ್ ಬಂಗಲೆಯಲ್ಲಿ ಸರ್ಪಗಾವಲು

Update: 2024-10-25 03:36 GMT

PC: x.com/haque_shahidul

ಹೊಸದಿಲ್ಲಿ: ಎರಡು ದಶಕಗಳ ಕಾಲ ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಆಕರ್ಷಕ ಉದ್ಯಾನವನಗಳಿಂದ ಸುತ್ತುವರಿದ ವೈಭವೋಪೇತ ಬಂಗಲೆಯಲ್ಲಿ ವಾಸವಿದ್ದರು. ಢಾಕಾ ನಗರದ ಹೃದಯ ಭಾಗದ 3600 ಚದರ ಮೀಟರ್ ವಿಶಾಲ ಬಂಗಲೆಯನ್ನು ರಾಣಿ ಎಲಿಜಬೆತ್-2 ಅವರ ವಾಸಕ್ಕಾಗಿ ಮೊದಲು ನಿರ್ಮಿಸಲಾಗಿತ್ತು.

ಆದರೆ ಆಗಸ್ಟ್ 5ರಂದು ವಿದ್ಯಾರ್ಥಿ ಪ್ರತಿಭಟನೆ ಹಿನ್ನೆಲೆಯಲ್ಲಿ ನಡೆದ ವ್ಯಾಪಕ ಹಿಂಸಾಚಾರದ ಸಂದರ್ಭದಲ್ಲಿ ಶೇಕ್ ಹಸೀನಾ ಅವರನ್ನು ಪದಚ್ಯುತಗೊಳಿಸಲಾಗಿತ್ತು ಹಾಗೂ ಭಾರತಕ್ಕೆ ಪಲಾಯನ ಮಾಡಿ ಅವರು ಆಶ್ರಯ ಪಡೆದರು. ಉತ್ತರ ಪ್ರದೇಶದ ಹಿಂಡಾನ್ ವಾಯುನೆಲೆಯ ಬಳಿ ಸುರಕ್ಷಿತ ಸ್ಥಳದಲ್ಲಿ ಅವರನ್ನು ಇರಿಸಲಾಗಿತ್ತು.

ಇದೀಗ 77 ವರ್ಷದ ಹಸೀನಾ ಕೇಂದ್ರ ದೆಹಲಿಯ ಇಂಡಿಯಾ ಗೇಟ್ ಮತ್ತು ಖಾನ್ ಮಾರ್ಕೆಟ್ ನಡುವಿನ ಸುರಕ್ಷಿತ ಬಂಗಲೆಯೊಂದರಲ್ಲಿ ವಾಸವಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಎಸಗಿದ್ದಾರೆ ಎನ್ನಲಾದ ದೌರ್ಜನ್ಯದ ಹಿನ್ನೆಲೆಯಲ್ಲಿ ಬಾಂಗ್ಲಾದ ಮಾಜಿ ಪ್ರಧಾನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣದಿಂದ ಬಹುಪದರದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಹಿಂಡಾನ್ ನಿಂದ ಸ್ಥಳಾಂತರಗೊಂಡ ಬಳಿಕ ಲ್ಯುಟಿಯೆನ್ಸ್ ದೆಹಲಿಯಲ್ಲಿ ಅವರು ವಾಸವಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಕಳೆದ ವಾರ ಅವರು ಲೋಧಿ ಗಾರ್ಡನ್ ನಲ್ಲಿ ಪತ್ತೆಯಾಗಿದ್ದರು ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿತ್ತು.

ಇದೀಗ ಹಸೀನಾ ಅವರ ಹೊಸ ನಿವಾಸ ಇಂಟೆಲಿಜೆನ್ಸ್ ಬ್ಯೂರೊದ ಸುರಕ್ಷಿತ ಗೃಹವಾಗಿದ್ದು, ಅವರ ಜೀವಕ್ಕೆ ಬೆದರಿಕೆ ಇರುವ ಕಾರಣದಿಂದ ನಿಖರವಾಗಿ ಆ ಸ್ಥಳವನ್ನು ಬಹಿರಂಗಪಡಿಸುವುದಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ಅವರ ವಿರುದ್ಧ ಬಾಂಗ್ಲಾದೇಶದಿಂದ ಬಂಧನ ವಾರೆಂಟ್ ಕೂಡಾ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News