ಪ್ರಬುದ್ಧತೆ ತೋರಿಸಿ : ಪಕ್ಷಗಳಿಗೆ ಸೇನಾ ಮುಖ್ಯಸ್ಥರ ಆಗ್ರಹ

Update: 2024-02-10 17:18 GMT

ಇಸ್ಲಮಾಬಾದ್ : ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕದ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಮುಖಂಡರು ಪ್ರಬುದ್ಧತೆ ಮತ್ತು ಏಕತೆಯನ್ನು ಪ್ರದರ್ಶಿಸುವಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸೀಮ್ ಮುನೀರ್ ಆಗ್ರಹಿಸಿದ್ದಾರೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆದಿರುವುದು, ಸೇನೆ ಬೆಂಬಲಿತ ಪಿಎಂಎಲ್-ಎನ್ ಪಕ್ಷ ಬಹುಮತ ಪಡೆಯುವುದಕ್ಕೆ ಅಡ್ಡಿಯಾಗಿದೆ. ಆದರೆ ಪಿಪಿಪಿ ಪಕ್ಷದ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚಿಸುವುದಾಗಿ ನವಾಝ್ ಷರೀಫ್ ಹೇಳಿದ್ದಾರೆ.

ಪಾಕಿಸ್ತಾನದ ರಾಜಕೀಯ ಕ್ಷೇತ್ರದಲ್ಲಿ ಸೇನೆ ಮಹತ್ತರ ಪಾತ್ರ ವಹಿಸಿದೆ. `ಚುನಾವಣೆಗಳು ಸೋಲು-ಗೆಲುವಿನ ಶೂನ್ಯ ಮೊತ್ತದ ಸ್ಪರ್ಧೆಯಲ್ಲ, ಅದು ಜನರ ಆದೇಶವನ್ನು ನಿರ್ಧರಿಸುವ ಪ್ರಕ್ರಿಯೆ. ಪಾಕಿಸ್ತಾನದ ಜನತೆ ದೇಶದ ಸಂವಿಧಾನದಲ್ಲಿ ತಮ್ಮ ವಿಶ್ವಾಸವನ್ನು ಮರುಸ್ಥಾಪಿಸಿರುವುದರಿಂದ, ರಾಜಕೀಯ ಪ್ರಬುದ್ಧತೆ ಮತ್ತು ಏಕತೆಯನ್ನು ಪ್ರದರ್ಶಿಸುವುದು ಈಗ ಎಲ್ಲಾ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. 250 ದಶಲಕ್ಷ ಜನರಿರುವ ಪ್ರಗತಿಪರ ದೇಶಕ್ಕೆ ಹೊಂದಿಕೆಯಾಗದ ಅರಾಜಕತೆ ಮತ್ತು ಧ್ರುವೀಕರಣದ ರಾಜಕೀಯದಿಂದ ದೂರ ಸರಿಯಲು ದೇಶಕ್ಕೆ ಸ್ಥಿರವಾದ ಕೈಗಳ ಅಗತ್ಯವಿದೆ ' ಎಂದು ಸೇನಾ ಮುಖ್ಯಸ್ಥರ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News