ದಕ್ಷಿಣ ಚೀನಾ ಸಮುದ್ರ | ವಿದೇಶಿಯರ ಬಂಧನಕ್ಕೆ ಅವಕಾಶ ನೀಡುವ ಹೊಸ ನಿಯಮ ಜಾರಿ

Update: 2024-06-15 15:32 GMT

Photo: NDtv

ಬೀಜಿಂಗ್ : ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅತಿಕ್ರಮಣಕ್ಕಾಗಿ ವಿದೇಶಿಯರನ್ನು ಬಂಧಿಸಲು ಅವಕಾಶ ನೀಡುವ ಹೊಸ ಕೋಸ್ಟ್ ಗಾರ್ಡ್(ಕರಾವಳಿ ರಕ್ಷಣೆ) ನಿಯಮ ಶನಿವಾರದಿಂದ ಜಾರಿಗೆ ಬಂದಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೇಲೆ ಚೀನಾದ ಸಂಪೂರ್ಣ ಹಕ್ಕು ಪ್ರತಿಪಾದನೆಯನ್ನು ಅಂತರರಾಷ್ಟ್ರೀಯ ಟ್ರಿಬ್ಯುನಲ್ 2016ರಲ್ಲಿ ತಿರಸ್ಕರಿಸಿದ್ದರೂ ಚೀನಾ ಈ ಪ್ರದೇಶದಲ್ಲಿ ತನ್ನ ಗಸ್ತು ನೌಕೆಗಳು ಹಾಗೂ ಕರಾವಳಿ ಕಾವಲು ನೌಕೆಗಳ ನಿಯೋಜನೆಯ ಜತೆಗೆ ಸಮರಾಭ್ಯಾಸವನ್ನು ಹೆಚ್ಚಿಸಿದೆ. ವಿವಾದಿತ ಪ್ರದೇಶದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ನಡುವೆ ಹಲವು ಬಾರಿ ಸಂಘರ್ಷ ನಡೆದಿದೆ. ಶನಿವಾರದಿಂದ ಚೀನಾದ ಕರಾವಳಿ ರಕ್ಷಣಾ ಪಡೆಯವರು ` ಗಡಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯನ್ನು ಉಲ್ಲಂಘಿಸಿದ ಶಂಕೆಯಲ್ಲಿ' ವಿದೇಶೀಯರನ್ನು ಬಂಧಿಸಬಹುದು. ಗಂಭೀರ ಪ್ರಕರಣಗಳಲ್ಲಿ 60 ದಿನದವರೆಗೆ ಬಂಧನದಲ್ಲಿ ಇರಿಸಲು ಅವಕಾಶವಿದೆ. ಚೀನಾದ ಪ್ರಾದೇಶಿಕ ಸಮುದ್ರವ್ಯಾಪ್ತಿ ಹಾಗೂ ಪಕ್ಕದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸುವ ವಿದೇಶಿ ಹಡಗುಗಳನ್ನೂ ವಶಕ್ಕೆ ಪಡೆಯಬಹುದು' ಎಂದು ಆನ್‍ಲೈನ್‍ನಲ್ಲಿ ಪ್ರಕಟಿಸಲಾಗಿರುವ ಹೊಸ ಮಾರ್ಗಸೂಚಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ `ಹೊಸ ನಿಯಮಗಳು ಅತ್ಯಂತ ಕಳವಳಕ್ಕೆ ಕಾರಣವಾಗಿದೆ. ನಮ್ಮ ಮೀನುಗಾರರನ್ನು ರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ' ಎಂದಿದ್ದಾರೆ.

ಚೀನಾದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಿ7 ದೇಶಗಳು, ಇದು ಜಲಮಾರ್ಗದಲ್ಲಿ ಚೀನಾದ ಅಪಾಯಕಾರಿ ಆಕ್ರಮಣವಾಗಿದೆ ಎಂದು ಟೀಕಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಮಿಲಿಟರೀಕರಣ, ಬೆದರಿಕೆಯ ಕೃತ್ಯಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ' ಎಂದು ಜಿ7 ದೇಶಗಳು ಹೇಳಿವೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News