ಟೆಕ್ಸಾಸ್‍ನಲ್ಲಿ ಭೀಕರ ಕಾಡ್ಗಿಚ್ಚು | ತುರ್ತು ಪರಿಸ್ಥಿತಿ ಘೋಷಣೆ

Update: 2024-02-28 17:33 GMT

Screengrab:X/@FoxNews

ವಾಷಿಂಗ್ಟನ್: ಗಾಳಿ, ಶುಷ್ಕ ಹವೆ ಮತ್ತು ಹೆಚ್ಚಿರುವ ತಾಪಮಾನದಿಂದಾಗಿ ಅಮೆರಿಕದ ಟೆಕ್ಸಾಸ್ ರಾಜ್ಯದ ಉತ್ತರ ಪ್ರಾಂತದಲ್ಲಿ 13 ಕಡೆ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಕ್ಷಿಪ್ರವಾಗಿ ಹರಡುತ್ತಿದ್ದು ಇದುವರೆಗೆ ಸುಮಾರು 77,135 ಎಕರೆ ಭೂಮಿಯನ್ನು ಸುಟ್ಟುಹಾಕಿದೆ ಎಂದು ಟೆಕ್ಸಾಸ್‍ನ ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

20%ದಷ್ಟು ಕಾಡ್ಗಿಚ್ಚನ್ನು ನಿಯಂತ್ರಿಸಲಾಗಿದೆ. ಆದರೆ ಉಷ್ಣ ಹವೆಯಿಂದ ಕಾಡ್ಗಿಚ್ಚು ವೇಗವಾಗಿ ಹರಡುತ್ತಿರುವುದರಿಂದ ಸ್ಥಳೀಯರನ್ನು ತುರ್ತಾಗಿ ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಗಂಟೆಗೆ 65 ಮೈಲು ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇರುವುದರಿಂದ ಹೊಸ ಕಾಡ್ಗಿಚ್ಚು ಕಾಣಿಸಿಕೊಳ್ಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಟೆಕ್ಸಾಸ್‍ನ ಪ್ರಿಚ್ ನಗರದಲ್ಲಿ ಹೊಗೆಯ ಕಾರ್ಮೋಡ ಆಗಸಕ್ಕೆ ವ್ಯಾಪಿಸಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. 200ಕ್ಕೂ ಅಧಿಕ ಜನರನ್ನು ಸ್ಥಳೀಯ ಚರ್ಚ್‍ಗೆ ಸ್ಥಳಾಂತರಿಸಲಾಗಿದೆ. ಮೂರ್ ನಗರದಲ್ಲಿ ಕಾಡ್ಗಿಚ್ಚು ನಿಯಂತ್ರಣ ಮೀರಿದ್ದು 20,000 ಎಕರೆಗೂ ಅಧಿಕ ಪ್ರದೇಶವನ್ನು ಸುಟ್ಟು ಹಾಕಿದೆ.

ಟೆಕ್ಸಾಸ್‍ನ ಕೆನಡಿಯನ್ ಜಿಲ್ಲೆಯ ಸ್ಥಳೀಯ ಆಸ್ಪತ್ರೆಯಲ್ಲಿನ ರೋಗಿಗಳನ್ನು ಹಾಗೂ ವೃದ್ಧಾಶ್ರಮದ ನಿವಾಸಿಗಳನ್ನು ಪಾಂಪ ನಗರದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ, ಟೆಕ್ಸಾಸ್‍ನಲ್ಲಿರುವ ಪರಮಾಣು ಶಸ್ತ್ರ ಉತ್ಪಾದಿಸುವ ಸ್ಥಾವರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಮಂಗಳವಾರ ಆದೇಶಿಸಿದ್ದರು. ಬಳಿಕ ಅಗ್ನಿಶಾಮಕ ದಳದ ಸತತ ಕಾರ್ಯಾಚರಣೆಯಿಂದ ಸ್ಥಾವರದ ಸಮೀಪದ ಕಾಡ್ಗಿಚ್ಚನ್ನು ನಿಯಂತ್ರಿಸಲಾಗಿದ್ದು ಬುಧವಾರ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News